ನವದೆಹಲಿ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜ್ಯಸಭೆಗೆ ಕಳುಹಿಸಿ ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರ ಗೊಂದಲಕ್ಕೆ ತೆರೆ ಎಳೆಯಲು ಎಐಸಿಸಿ ಮುಂದಾಗಿದೆ.
ಬಿಹಾರದಲ್ಲಿ ನಿತೀಶ್ ಕುಮಾರ್ ಅವರನ್ನು ಅಧಿಕಾರದಿಂದ ಕೆಳಗಿಸಲು ಬಿಜೆಪಿ ಮಾಡಿದ ಕಾರ್ಯತಂತ್ರವನ್ನೇ ಕಾಂಗ್ರೆಸ್ ಅನುಸರಿಸಲು ಹೊರಟಿದೆ.
ರಾಜ್ಯಸಭಾ ಸದಸ್ಯತ್ವ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ನಾಲ್ವರ ರಾಜ್ಯಸಭಾ ಸದಸ್ಯತ್ವ ಅವಧಿ ಬರುವ ಜೂನ್ 30ಕ್ಕೆ ಅಂತ್ಯಗೊಳ್ಳಲಿದೆ.
ವಿಧಾನಸಭೆಯಲ್ಲಿನ ಪಕ್ಷಗಳ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್‌ಗೆ ಮೂರು, ಬಿಜೆಪಿಗೆ ಒಂದು ಸ್ಥಾನ ಲಭ್ಯವಾಗಲಿದೆ.
ಸಿದ್ದರಾಮಯ್ಯ ಅವರನ್ನು ರಾಜ್ಯಸಭೆಗೆ ಕರೆತರುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸುವಂತೆ ಮಾಡಲು ಸ್ವತಃ ರಾಹುಲ್ ಗಾಂಧಿ ಆಸಕ್ತಿ ತೋರಿದ್ದಾರೆ.
ಶಿವಕುಮಾರ್ ಬೇಡಿಕೆ
ರಾಜ್ಯಸಭಾ ಸದಸ್ಯತ್ವ ಕಲ್ಪಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಗೌರವದಿಂದ ಇಳಿಸಿದಂತಾಗುತ್ತದೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೇಡಿಕೆ ಈಡೇರಿಸಲು ಸಾಧ್ಯವಾಗಲಿದೆ ಎಂಬುದು ಎಐಸಿಸಿ ಲೆಕ್ಕಾಚಾರವಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೆ ಮುನ್ನ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವಿನ ಮುಖ್ಯಮಂತ್ರಿ ಗಾದಿ ತಿಕ್ಕಾಟ ಪರಿಹರಿಸಲು ತಲಾ ಎರಡೂವರೆ ವರ್ಷ ಅಧಿಕಾರ ಸೂತ್ರ ರಚಿಸಲಾಗಿತ್ತು.
ಇದರಂತೆ 2025ರ ನವೆಂಬರ್ 20ಕ್ಕೆ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಬೇಕಿತ್ತು ಆದರೆ, ಮುಖ್ಯಮಂತ್ರಿ ಸ್ಥಾನ ತ್ಯಜಿಸದೆ ಎಲ್ಲವನ್ನೂ ರಾಹುಲ್ ಗಾಂಧಿ ನಿರ್ಧಾರಕ್ಕೆ ಬಿಟ್ಟಿರುವುದಾಗಿ ಹೇಳಿ ನುಣಚಿಕೊಂಡಿದ್ದಾರೆ.
ಅಧಿಕಾರ ಹಸ್ತಾಂತರಕ್ಕೆ ಪಟ್ಟು
ಆದರೆ, ಪಟ್ಟುಬಿಡದ ಶಿವಕುಮಾರ್ ಅಧಿಕಾರ ಹಸ್ತಾಂತರಕ್ಕೆ ಪಕ್ಷದ ವರಿಷ್ಠರ ದುಂಬಾಲು ಬಿದ್ದಿದ್ದಾರೆ.
ಈ ಗೊಂದಲ ನಿವಾರಣೆಗೆ ರಾಜ್ಯಸಭಾ ಚುನಾವಣೆಯನ್ನು ಬಳಿಸಿಕೊಂಡು ಕರ್ನಾಟಕ ಕಾಂಗ್ರೆಸ್‌ನಲ್ಲಿನ ಗೊಂದಲ ಪರಿಹರಿಸಲು ವರಿಷ್ಠರು ಮುಂದಾಗಿದ್ದಾರೆ.


