ಬೆಂಗಳೂರು:ರಾಜಧಾನಿಗೆ ಪರ್ಯಾಯವಾಗಿ ಬಿಡದಿ ಬಳಿ ನವನಗರ ನಿರ್ಮಾಣ ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ರಿಯಲ್ ಎಸ್ಟೇಟ್ ದಂಧೆಗೆ ಇಳಿದಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಗುರುತರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿವಿಧ ಅಭಿವೃದ್ಧಿ ಹೆಸರಿನಲ್ಲಿ ರೈತರಿಂದ ಸ್ವಾಧೀನಪಡಿಸಿಕೊಂಡಿರುವ ಭೂಮಿ ಕುರಿತು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗೆ ಕಿವಿಮಾತು
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಿಸದ ಅವರು, ಯಾವುದೋ ಒಬ್ಬ ವ್ಯಕ್ತಿಯ ದಾಕ್ಷಿಣ್ಯಕ್ಕೆ ಬಲಿಯಾಗಿ ಮುಖ್ಯಮಂತ್ರಿ ರಿಯಲ್ ಎಸ್ಟೇಟ್ ದಲ್ಲಾಳಿ ಆಗಬಾರದು ಎಂದು ಕಿವಿಮಾತು ಹೇಳಿದರು.
ಆ ವ್ಯಕ್ತಿ ಹೇಳಿದಂತೆ ಕೇಳುವ ಮೂಲಕ ಇನ್ನೆರಡು ವರ್ಷ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ.
ಕುರ್ಚಿಗಾಗಿ ಸಿದ್ದರಾಮಯ್ಯ ತಮ್ಮ ಸಹಿಯನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ, ಅಧಿಕಾರದ ಕೊನೆಗಾಲದಲ್ಲಿ ಹೆಸರು ಕೆಡಿಸಿಕೊಳ್ಳದೆ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು ಎಂದರು.
ಟೌನ್‌ಶಿಪ್‌ಗೆ ವಿರೋಧಿಸಿತ್ತು
ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಗರದ ಹೊರವಲಯದಲ್ಲಿ ಐದು ಟೌನ್‌ಶಿಪ್‌ಗಳ ನಿರ್ಮಾಣಕ್ಕೆ ಮುಂದಾಗಿದ್ದೆ, ಆಗ ನನ್ನ ಸರ್ಕಾರಕ್ಕೆ ಬೆಂಬಲ ನೀಡಿದ್ದ ಕಾಂಗ್ರೆಸ್ ವಿರೋಧಿಸಿತ್ತು.
ಆ ಸಂದರ್ಭದಲ್ಲಿ ಕಾಂಗ್ರೆಸ್‌ನ ಎಚ್.ಕೆ.ಪಾಟೀಲ್ ಅಧ್ಯಕ್ಷತೆಯಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಯಿತು, ಆ ವರದಿಯಲ್ಲಿ ನವನಗರಗಳ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಲಾಗಿತ್ತು.
ಬಿಡದಿ ಬಳಿ ಟೌನ್‌ಶಿಪ್ ನಿರ್ಮಾಣ ಸಂಬಂಧ ಸ್ಥಳೀಯ ರೈತರ ಜೊತೆ ಎರಡು-ಮೂರು ಸಭೆಗಳನ್ನೂ ಮಾಡಿದ್ದೆ, ವಿರೋಧ ವ್ಯಕ್ತವಾದಾಗ ಯೋಜನೆಯನ್ನು ಕೈಬಿಟ್ಟಿದ್ದೆ ಎಂದರು.
ಬಿಡದಿ ರೈತರು ಕೃಷಿಕರೇ ಅಲ್ಲ
ಆದರೆ, ಇಂದು ಉಪಮುಖ್ಯಮಂತ್ರಿ, ಬಿಡದಿ ರೈತರು ಕೃಷಿಕರೇ ಅಲ್ಲ ಎಂಬುದಾಗಿ ಒಮ್ಮೆ ಹೇಳಿದರೆ, ಮತ್ತೊಮ್ಮೆ ಶೇಕಡ 80ರಷ್ಟು ರೈತರು ನವನಗರ ನಿರ್ಮಾಣಕ್ಕೆ ಅನುಮತಿ ಕೊಟ್ಟಿದ್ದಾರೆ ಎನ್ನುತ್ತಾರೆ.
ರೈತರನ್ನು ಬೆದರಿಸಿ ಭೂಸ್ವಾಧೀನಕ್ಕೆ ಶಿವಕುಮಾರ್ ಕೈಹಾಕಿದ್ದಾರೆ, ಈ ಯೋಜನೆಯಿಂದ ಸಾವಿರಾರು ಎಕರೆ ಕಬಳಿಕೆ ಆಗುತ್ತದೆ.
ವಶಪಡಿಸಿಕೊಂಡ ಭೂಮಿಯನ್ನು ಯಾರ‍್ಯಾರಿಗೆ ಹಂಚಲು ಹೊರಟಿದ್ದಾರೋ ತಿಳಿಯದು.
ಜಮೀನು ಯಾರ ಹೆಸರಿಗೆ
ಎಂಟು ಹಳ್ಳಿಗಳ ವ್ಯಾಪ್ತಿಯಲ್ಲಿ 2,320 ಎಕರೆ ಜಮೀನಿದೆ ಎಂದು ಉಲ್ಲೇಖಿಸಲಾಗಿತ್ತು, ಆದರೆ, ಅಧಿಸೂಚನೆಯಲ್ಲಿ 750 ಎಕರೆ ಎಂದಷ್ಟೇ ತಿಳಿಸಲಾಗಿದೆ, ಉಳಿದ ಜಮೀನು ಯಾರ ಹೆಸರಿಗೆ ಹೋಯಿತು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಶಾಸಕರು, ಅಧಿಕಾರಿಗಳು ಈ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಕೊಂಡು ಸರ್ಕಾರಿ ಹಣ ಲೂಟಿಗೆ ಹೊರಟಿದ್ದಾರೆ ಎಂದು ಆರೋಪಿಸಿದರು.
’ಎ’ ಖಾತಾ ಮತ್ತು ’ಬಿ’ ಖಾತಾ ಹೆಸರಿನಲ್ಲಿ ಬೆಂಗಳೂರು ಉಸ್ತುವಾರಿ ಸಚಿವರು ಹಣ ಹೊಡೆಯಲು ಹೊರಟಿದ್ದಾರೆ, ಅದಕ್ಕೆ ನಾಗರಿಕರು ಬಲಿಯಾಗಬಾರದು ಎಂದರು.


