ಬೆಂಗಳೂರು:ವಿಧಾನಸಭೆಯಿಂದ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐವರು ಹಾಗೂ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಆಯ್ಕೆಗೊಂಡಿದ್ದು, ಜೆಡಿಎಸ್ ಅಭ್ಯರ್ಥಿ ಪರಾಭವಗೊಂಡಿದ್ದಾರೆ.
ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್, ಪಿ.ವಿ.ಮೋಹನ್, ತಿಪ್ಪಣ್ಣಪ್ಪ ಕಮಕ್ನೂರು, ಬಿ.ಎಸ್.ಶಿವಣ್ಣ, ವಿನಯ್ ಕಾರ್ತಿಕ್, ಬಿಜೆಪಿಯ ಲಿಂಗರಾಜ ಪಾಟೀಲ್, ರಘು ಕೌಟಿಲ್ಯ ಚುನಾಯಿತರಾಗಿದ್ದಾರೆ.
ಗೋವಿಂದರಾಜು ಪರಾಭವ
ಒಂದು ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಕಾಂಗ್ರೆಸ್‌ನ ವಿನಯ್ ಕಾರ್ತಿಕ್, ಜೆಡಿಎಸ್‌ನ ಗೋವಿಂದರಾಜು ಅವರನ್ನು ಪರಾಭವಗೊಳಿಸಿ ಮೊದಲ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ.
ಕಾಂಗ್ರೆಸ್‌ನ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಹಾಗೂ ಜೆಡಿಎಸ್‌ನ ಗೋವಿಂದರಾಜು ಗೆಲುವಿಗೆ ಅಗತ್ಯವಿರುವ ಮೊದಲ ಪ್ರಾಶಸ್ತ್ಯ ಮತಗಳ ಕೊರತೆ ಇದ್ದರೂ ಕಣದಲ್ಲಿದ್ದರು.
ಕಾಂಗ್ರೆಸ್ ತಮ್ಮ ಮೊದಲ ನಾಲ್ಕು ಅಭ್ಯರ್ಥಿಗಳಿಗೆ ತಲಾ 30 ಮೊದಲ ಪ್ರಾಶಸ್ತ್ಯ ಮತಗಳನ್ನು ಹಂಚಿ, ನಂತರ ಉಳಿದ ಪಕ್ಷದ ಹಾಗೂ ಪಕ್ಷೇತರ ಶಾಸಕರ ಮತಗಳನ್ನು ವಿನಯ್ ಕಾರ್ತಿಕ್ ಅವರಿಗೆ ನಿಗದಿ ಪಡಿಸಿತ್ತು.
2ನೇ ಪ್ರಾಶಸ್ತ್ಯ ಮತ
ಅಲ್ಲದೆ, ಕಾಂಗ್ರೆಸ್‌ನ ಎಲ್ಲಾ ಸದಸ್ಯರು ತಮ್ಮ 2ನೇ ಪ್ರಾಶಸ್ತ್ಯ ಮತಗಳನ್ನು ವಿನಯ್ ಕಾರ್ತಿಕ್ ಪರ ಚಲಾಯಿಸಿದ್ದರಿಂದ ಅವರು ಅಧಿಕೃತ ಅಭ್ಯರ್ಥಿಗಳಿಗಿಂತ ಹೆಚ್ಚು ಮತ ಪಡೆದು ಚುನಾಯಿತರಾಗಿದ್ದಾರೆ.
ಕಾಂಗ್ರೆಸ್‌ನಲ್ಲಿನ ಆಂತರಿಕ ಭಿನ್ನಾಭಿಪ್ರಾಯವನ್ನು ರಾಜಕೀಯ ಲಾಭಕ್ಕೆ ಪರಿವರ್ತಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಶಾಸಕರ ಸಂಖ್ಯಾಬಲ ಇಲ್ಲದಿದ್ದರೂ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರು.
ಆದರೆ, ಅವರ ನಿರೀಕ್ಷೆ ಹುಸಿಯಾಗಿ ತಮ್ಮ ಅಭ್ಯರ್ಥಿಗೆ ಪಕ್ಷದ 18 ಮತಗಳ ಜೊತೆಗೆ ಬಿಜೆಪಿಯ ಉಳಿಕೆ ಮತಗಳು ಲಭ್ಯವಾದರೂ ಗೆಲುವಿನ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ.
ಮೂರು ದಿನ ರೆಸಾರ್ಟ್‌ನಲ್ಲಿ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷದ 5ನೇ ಅಭ್ಯರ್ಥಿ ವಿನಯ್ ಗೆಲುವಿಗಾಗಿ ಕಾಂಗ್ರೆಸ್‌ನ ಎಲ್ಲಾ ಶಾಸಕರನ್ನು ಮೂರು ದಿನ ರೆಸಾರ್ಟ್ ಒಂದರಲ್ಲಿ ಇಟ್ಟಿದ್ದರು.
ರೆಸಾರ್ಟ್‌ನಲ್ಲಿ ಮತದಾನ ವಿಧಾನ ಕುರಿತು ತರಬೇತಿ ನೀಡಲಾಗಿತ್ತು, ಮತದಾನ ದಿನವಾದ ಇಂದು ನೇರವಾಗಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮತ್ತೊಂದು ಸಭೆ ನಡೆಸಿ, ಯಾವ ಅಭ್ಯರ್ಥಿಗೆ ಯಾರು ಮತ ಹಾಕಬೇಕೆಂಬ ಗೌಪ್ಯ ಚೀಟಿ ನೀಡಲಾಯಿತು.
ಮೊದಲ ಪ್ರಾಶಸ್ತ್ಯ ಮತಗಳ ಚಲಾವಣೆ ನಂತರ ದ್ವಿತೀಯ ಪ್ರಾಶಸ್ತ್ಯ ಮತವನ್ನು ವಿನಯ್ ಕಾರ್ತಿಕ್ ಅವರಿಗೆ ನೀಡುವಂತೆ ವಿಪ್ ಹೊರಡಿಸಲಾಗಿತ್ತು.
ಶಾಸಕರ ಮೇಲ್ವಿಚಾರಣೆ
ಪಕ್ಷದ ಶಾಸಕರು ಮತ ಚಲಾಯಿಸುವವರೆಗೂ ಶಿವಕುಮಾರ್ ಹಾಗೂ ಹರಿಪ್ರಸಾದ್ ವಿಧಾನಸೌಧದಲ್ಲಿನ ಪಕ್ಷದ ಕಚೇರಿಯಲ್ಲಿ ಕುಳಿತು ಮೇಲ್ವಿಚಾರಣೆ ನಡೆಸಿದರು.
ಅನಾರೋಗ್ಯದಿಂದ ಬಳಲುತ್ತಿದ್ದರೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಇಕ್ಬಾಲ್ ಹುಸೇನ್ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು.


