ಬೆಂಗಳೂರು:ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಮಂತ್ರಿಮಂಡಲವನ್ನು ಸೋಮವಾರ ಸಂಜೆ ವಿಸ್ತರಿಸಿ ಖಾಲಿ ಸ್ಥಾನಗಳನ್ನು ಭರ್ತಿ ಮಾಡಲಿದ್ದಾರೆ.
ಲೋಕಭವನದ ಗಾಜಿನಮನೆಯಲ್ಲಿ ಅಂದು ಸಂಜೆ 5 ಗಂಟೆಗೆ ನಡೆಯುವ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಸಿದ್ಧತೆ
ಪ್ರಮಾಣವಚನ ಕಾರ್ಯಕ್ರಮಕ್ಕೆ ಡಿಪಿಆರ್ ಎಲ್ಲಾ ಸಿದ್ಧತೆ ನಡೆಸಿರುವುದಲ್ಲದೆ, ಸರ್ಕಾರ ಬಯಸುವವರಿಗೆ ಆಹ್ವಾನಪತ್ರ ಕಳುಹಿಸಲು ತಯಾರಿ ಮಾಡಿದೆ.
ರಾಜ್ಯದಲ್ಲಿ ತಲೆದೋರಿರುವ ಬರ ಹಾಗೂ ಕಾವೇರಿ ಜಲ ವಿವಾದ ಹಿನ್ನೆಲೆಯಲ್ಲಿ ಸಮಾರಂಭವನ್ನು ಆದಷ್ಟು ಸರಳವಾಗಿ ಹಾಗೂ ಹೆಚ್ಚು ಜನ ಜಮಾಯಿಸದಂತೆ ನೋಡಿಕೊಳ್ಳಿ ಎಂದು ಡಿಪಿಆರ್ ಮತ್ತು ಗೃಹ ಇಲಾಖೆಗೆ ಮುಖ್ಯಮಂತ್ರಿ ಆದೇಶಿಸಿದ್ದಾರೆ.
ಮಂತ್ರಿ ಆಗುವವರ ಬೆಂಬಲಿಗರು ಲೋಕಭವನದ ಹೊರಗೆ ಹಾಗೂ ಆಸುಪಾಸಿನಲ್ಲಿ ಸಂಭ್ರಮಾಚರಣೆ ಮಾಡದಂತೆ, ಪಟಾಕಿ ಸಿಡಿಸದಂತೆ ಕಟ್ಟಾದೇಶ ಮಾಡಲಾಗಿದೆ.
ಪಟ್ಟಿ ಮುಖ್ಯಮಂತ್ರಿ ಕೈಸೇರಿಲ್ಲ
ಸಂಭಾವ್ಯ ಸಚಿವರ ಪಟ್ಟಿ ಇನ್ನೂ ಮುಖ್ಯಮಂತ್ರಿ ಕೈಸೇರಿಲ್ಲ, ಆದರೆ, ಎಐಸಿಸಿ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುಜೇವಾಲ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರಿಂದ ಒಪ್ಪಿಗೆ ಪಡೆದ ಪಟ್ಟಿಯನ್ನು ರಾಜ್ಯಕ್ಕೆ ಖುದ್ದು ತರಲಿದ್ದಾರೆ.
ನಗರಕ್ಕೆ ಧಾವಿಸುತ್ತಿದ್ದಂತೆ ತಾವು ತಂಗಲಿರುವ ಹೋಟೆಲ್ಗೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರನ್ನು ಕರೆಸಿಕೊಂಡು ವರಿಷ್ಠರ ಸಂದೇಶ ನೀಡಲಿದ್ದಾರೆ.
ಸರ್ಕಾರ ಮತ್ತು ಪಕ್ಷ ಸಂಘಟನೆ ಗಮನದಲ್ಲಿ ಇಟ್ಟುಕೊಂಡು ರಾಹುಲ್ ಗಾಂಧಿ ಮತ್ತು ಖರ್ಗೆ, ಮುಖ್ಯಮಂತ್ರಿ ಶಿವಕುಮಾರ್ ತಂಡಕ್ಕೆ ಸಮರ್ಥರನ್ನು ಆಯ್ಕೆ ಮಾಡಿದ್ದಾರೆ.
ಪರಸ್ಪರ ಸಹಕರಿಸಲು ಸೂಚನೆ
ಸಚಿವಾಕಾಂಕ್ಷಿಗಳು ಬಹಳಷ್ಟು ಮಂದಿ ಇದ್ದಾರೆ, ಎಲ್ಲರಿಗೂ ಅವಕಾಶ ದೊರಕಿಸಲು ಸಾಧ್ಯವಿಲ್ಲ, ಪಕ್ಷದಲ್ಲಿ ಎದುರಾಗಬಹುದಾದ ಸಮಸ್ಯೆ ನಿಭಾಯಿಸುವಲ್ಲಿ ಪರಸ್ಪರ ಸಹಕರಿಸುವಂತೆ ಸೂಚಿಸಲಿದ್ದಾರೆ.
ಇದರೊಂದಿಗೆ ಕಳೆದ ಒಂದುವರೆ ತಿಂಗಳಿಂದ ನನೆಗುದಿಗೆ ಬಿದ್ದಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಕೊನೆಗೂ ಮುಹೂರ್ತ ನಿಗದಿಪಡಿಸಲಾಗಿದೆ.
ಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿರುವ ಹಿರಿಯ ನಾಯಕ ಯಲಬುರಗಿ ಶಾಸಕ ಬಸವರಾಜ ರಾಯರೆಡ್ಡಿ ಅವರನ್ನು ವಿಧಾನಸಭಾಧ್ಯಕ್ಷ ಸ್ಥಾನದಲ್ಲಿ ಕೂರಿಸಲು ವರಿಷ್ಠರು ಒಲವು ತೋರಿದ್ದಾರೆ ಎನ್ನಲಾಗಿದೆ.
ರಾಯರೆಡ್ಡಿಗೆ ನೂತನ ಜವಾಬ್ದಾರಿ
ರಾಯರೆಡ್ಡಿ ಅವರಿಗೆ ಈ ವಿಚಾರ ತಿಳಿಸಿ, ನೂತನ ಜವಾಬ್ದಾರಿ ವಹಿಸಿಕೊಳ್ಳುವಂತೆ ಹೇಳಬೇಕು ಎಂಬ ಸಲಹೆ ಮಾಡಲಾಗಿದೆ.
ಮಂತ್ರಿಮಂಡಲಕ್ಕೆ 14 ಮಂದಿ ಯುವಪಡೆ ಸೇರ್ಪಡೆಯಾಗಲಿದ್ದು, ಇವರೊಂದಿಗೆ 6 ಮಂದಿ ಹಿರಿಯರು ಮತ್ತು ಅನುಭವಿಗಳಿಗೆ ಅವಕಾಶ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ.
ಸಿ.ಎಸ್.ನಾಡಗೌಡ, ತನ್ವೀರ್ ಸೇಠ್, ಲಕ್ಷ್ಮಣ ಸವದಿ, ಲಕ್ಷ್ಮಿ ಹೆಬ್ಬಾಳ್ಕರ್, ಪುಟ್ಟರಂಗಶೆಟ್ಟಿ, ಎಚ್.ಆರ್.ಗವಿಯಪ್ಪ, ಯಶವಂತರಾಯಗೌಡ ಪಾಟೀಲ್, ಎಚ್.ಸಿ.ಬಾಲಕೃಷ್ಣ, ಶರತ್ ಬಚ್ಚೇಗೌಡ, ರಘುಮೂರ್ತಿ, ಶಿವಲಿಂಗೇಗೌಡ, ಪ್ರಸಾದ್ ಅಬ್ಬಯ್ಯ, ಅಥವಾ ನರೇಂದ್ರ ಸ್ವಾಮಿ ಅವರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ.


