ನವದೆಹಲಿ:ಬರಗಾಲದಿಂದ ತತ್ತರಿಸಿರುವ ಹಳೇ ಮೈಸೂರು ಪ್ರಾಂತ್ಯಕ್ಕೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ಮುಂಗಾರು ಮಳೆ ಆಭಾವದಿಂದ ಕಾವೇರಿ ಕಣಿವೆಯ ಜಲಾಶಯಗಳ ನೀರಿನಮಟ್ಟ ಕುಸಿದಿದ್ದರೂ ತಮಿಳುನಾಡಿಗೆ ಪ್ರತಿನಿತ್ಯ 3,500 ಕ್ಯೂಸೆಕ್ ನೀರು ಹರಿಸುವ ಆದೇಶ ಬರಸಿಡಿಲಿನಂತೆ ಎರಗಿದೆ.
ಕರ್ನಾಟಕಕ್ಕೆ ಸೂಚನೆ
ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ದೆಹಲಿಯಲ್ಲಿಂದು ತುರ್ತು ಪತ್ರಿಕಾಗೋಷ್ಠಿ ನಡೆಸಿ, ಮುಂದಿನ 15 ದಿನಗಳ ಕಾಲ ಪ್ರತಿನಿತ್ಯ 3,500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿದೆ ಎಂದು ತಿಳಿಸಿದರು.
ಪ್ರತಿನಿತ್ಯ 3,500 ಕ್ಯೂಸೆಕ್ಸ್ ನೀರು ಹರಿಸಿದರೆ, 15 ದಿನದಲ್ಲಿ ಒಟ್ಟಾರೆ ನಾಲ್ಕು ಟಿಎಂಸಿಗಿಂತ ಹೆಚ್ಚು ನೀರು ತಮಿಳುನಾಡಿಗೆ ನೀಡಬೇಕಾಗುತ್ತದೆ.
ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಕುರಿತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಬೇಕಿದ್ದು, ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕೇವಲ 8 ಟಿಎಂಸಿ ಸಂಗ್ರಹ
ಕೃಷ್ಣರಾಜಸಾಗರ (ಕೆಆರ್‌ಎಸ್) ಅಣೆಕಟ್ಟೆಯಲ್ಲಿ ಈಗ ಸಂಗ್ರಹವಿರುವುದು ಕೇವಲ 8 ಟಿಎಂಸಿ ನೀರು, ಕಾವೇರಿ ಜಲಾನಯನ ಪ್ರದೇಶದ ಇತರೆ ಅಣೆಕಟ್ಟುಗಳಲ್ಲಿ ಅಲ್ಪಪ್ರಮಾಣದ ನೀರು ಇದ್ದು, ಎಲ್ಲ ಸೇರಿ ಮುಂದಿನ ಒಂದು ವರ್ಷಕ್ಕೆ ಕುಡಿಯುವ ನೀರಿಗೆ ಎಷ್ಟು ಅಗತ್ಯವಿದೆ ಎಂಬ ಲೆಕ್ಕಾಚಾರ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಹಳೇ ಮೈಸೂರು ಭಾಗಕ್ಕೆ ಕಾವೇರಿ ನದಿ ಪಾತ್ರದ ಜಲಾಶಯಗಳಿಂದ ಮಾಸಿಕ 3.25 ಟಿಎಂಸಿ ನೀರಿನ ಅಗತ್ಯವಿದೆ, ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡಿ, ಮುಂದಿನ ಕ್ರಮದ ಕುರಿತು ನಿರ್ಧರಿಸಲಾಗುವುದು.
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಈ ಹಿಂದೆ ನೀಡಿದ ಆದೇಶದಂತೆ ನಮ್ಮ ಜಲಾಶಯಗಳಲ್ಲಿನ ನೀರನ್ನು ಕುಡಿಯಲು ಮಾತ್ರ ಬಳಕೆ ಮಾಡಿಕೊಳ್ಳುತ್ತಿದ್ದೇವೆ.
ಕಳೆದ 15 ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಸ್ವಲ್ಪ ಮಳೆಯಾಗಿ ನೆಮ್ಮದಿಯ ಉಸಿರು ಬಿಡುವಂತಾಗಿದೆ, ಮಳೆ ಆಗಿರದಿದ್ದರೆ, ಪರಿಸ್ಥಿತಿ ತುಂಬಾ ಬಿಗಡಾಯಿಸುತ್ತಿತ್ತು.
ನಾವೇ ಸಂಕಷ್ಟದಲ್ಲಿದ್ದೇವೆ
ಕಳೆದ ವರ್ಷ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ತಮಿಳುನಾಡಿಗೆ 366 ಟಿಎಂಸಿ ನೀರು ಹರಿದು ಹೋಗಿದೆ, ಈ ವರ್ಷ ಮಳೆಯಿಲ್ಲದೆ, ನಾವೇ ಸಂಕಷ್ಟಕ್ಕೆ ಸಿಲುಕಿದ್ದೇವೆ.
ಇಂತಹ ಸ್ಥಿತಿಯಲ್ಲಿ ಸಿಡಬ್ಲೂಸಿ ಆದೇಶ ಕರ್ನಾಟಕಕ್ಕೆ ನುಂಗಲಾರದ ತುತ್ತಾಗಿದೆ, ನೀರು ಹರಿಸುವ ಬಗ್ಗೆ ಸರ್ಕಾರ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಿದೆ ಎಂದರು.
ಕೃಷ್ಣರಾಜ ಸಾಗರ ಜಲಾಶಯಕ್ಕೆ ಸಮಾನಾಂತರವಾಗಿ ಮೇಕೆದಾಟು ಸಮೀಪ ಅಣೆಕಟ್ಟು ನಿರ್ಮಾಣ ಸಂಬಂಧ ಅಂತಿಮ ಡಿಪಿಆರ್ ಸಿದ್ಧಪಡಿಸಿ ಕೇಂದ್ರ ಜಲಶಕ್ತಿ ಇಲಾಖೆಗೆ ಸಲ್ಲಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಮೇಕೆದಾಟು ಸಮೀಪ ಅಣೆಕಟ್ಟೆ
ಮೇಕೆದಾಟು ಸಮೀಪ ಅಣೆಕಟ್ಟೆ ನಿರ್ಮಾಣಕ್ಕೆ ವಶಪಡಿಸಿಕೊಳ್ಳಲಾಗುವ ಅರಣ್ಯ ಭೂಮಿಗೆ ಪರ್ಯಾಯ ಜಾಗವನ್ನು ಮಂಡ್ಯ ಜಿಲ್ಲೆಯಲ್ಲಿ ನೀಡಲಾಗುವುದು.
ಜಿಲ್ಲಾಧಿಕಾರಿ ಈಗಾಗಲೇ ಪರ್ಯಾಯ ಭೂಮಿ ಗುರುತಿಸಿದ್ದು, ಅರಣ್ಯ ಇಲಾಖೆಗೆ ಹಸ್ತಾಂತರಿಸಿ, ಕೇಂದ್ರದ ಅನುಮತಿ ಪಡೆದು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಈ ಮಧ್ಯೆ, ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಸ್ಪಷ್ಟನೆ ನೀಡಿ, ಕರ್ನಾಟಕ ತನ್ನ ವ್ಯಾಪ್ತಿಯ ಕಾವೇರಿ ಜಲಾನಯನ ಪ್ರದೇಶದಲ್ಲಿ ಕೈಗೊಳ್ಳುವ ನೀರಾವರಿ ಯೋಜನೆಗಳಿಗೆ ಕೆಳಹರಿವಿನ ರಾಜ್ಯಗಳ ಅನುಮತಿ ಪಡೆಯುವ ಅಗತ್ಯ ಇಲ್ಲ ಎಂದಿದೆ.


