ನವದೆಹಲಿ:ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ.ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಸರ್ಕಾರಕ್ಕೆ ಪತ್ರ ಬರೆದಿರುವ ಬೆನ್ನೆಲ್ಲೇ ಪಕ್ಷ ಈ ತೀರ್ಮಾನ ಕೈಗೊಂಡಿದೆ.
ಶಿಸ್ತಿನ ಸಿಪಾಯಿ
ಈ ಮಧ್ಯೆ, ಸಚಿವ ಬಿ.ನಾಗೇಂದ್ರ ರಾಜೀನಾಮೆ ವದಂತಿಗೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, ಕಾಂಗ್ರೆಸ್ನಲ್ಲಿ ಸಚಿವರು, ಶಾಸಕರು, ಕಾರ್ಯಕರ್ತರು ಸೇರಿದಂತೆ ಎಲ್ಲರೂ ಶಿಸ್ತಿನ ಸಿಪಾಯಿಗಳು ಎಂದು ಮಾರ್ಮಿಕವಾಗಿ ನುಡಿದರು.
ನಾಗೇಂದ್ರ ವಿರುದ್ಧ ಸಿಬಿಐ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಆಗಬಾರದೆಂಬ ಕಾರಣಕ್ಕೆ ರಾಜೀನಾಮೆ ಪಡೆದುಕೊಳ್ಳುವಂತೆ ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೆ ಎಐಸಿಸಿ ಆದೇಶಿಸಿದೆ.
ವರಿಷ್ಠರ ಆದೇಶಕ್ಕೆ ತಲೆಬಾಗಿ ರಾಜೀನಾಮೆ ನೀಡಲು ನಿರ್ಧರಿಸಿರುವ ನಾಗೇಂದ್ರ, ಯಾವುದೇ ಕ್ಷಣದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ.
ಸಿಬಿಐ ತನಿಖೆ
ಕರ್ನಾಟಕದಲ್ಲಿ ಸಿಬಿಐ ತನಿಖೆಗೆ ಮುಕ್ತ ಅವಕಾಶ ಇಲ್ಲದಿರುವುದರಿಂದ ರಾಜ್ಯಪಾಲರ ಮುಖೇನ ನಾಗೇಂದ್ರ ವಿರುದ್ಧ ತನಿಖೆ ನಡೆಸಲು ಅವಕಾಶ ನೀಡುವಂತೆ ಸಿಬಿಐ ಕೋರಿತ್ತು.
ರಾಜ್ಯಪಾಲರ ಪತ್ರದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ, ಸಿಬಿಐ ತನಿಖೆಗೆ ವಹಿಸಲು ಅನುಮತಿ ನೀಡಬೇಕೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಬೇಕಿದೆ.
ಪ್ರಾಸಿಕ್ಯೂಷನ್ ಅನುಮತಿಗೆ ಸರ್ಕಾರ ನಿರಾಕರಿಸಿದಲ್ಲಿ, ರಾಜ್ಯಪಾಲರು ತಮ್ಮ ಅಧಿಕಾರ ಬಳಕೆ ಮಾಡಿಕೊಂಡು ನಾಗೇಂದ್ರ ವಿರುದ್ಧ ತನಿಖೆಗೆ ಆದೇಶ ಮಾಡಬಹುದಾಗಿದೆ.
ಸರ್ಕಾರಕ್ಕೆ ಮುಜುಗರ
ರಾಜ್ಯಪಾಲರು ಇಂತಹ ನಿರ್ಧಾರ ಕೈಗೊಂಡಿದ್ದೇ ಆದಲ್ಲಿ, ಸರ್ಕಾರಕ್ಕೆ ಮುಜುಗರವಾಗುತ್ತದೆ ಎಂಬುದನ್ನು ಮುಖ್ಯಮಂತ್ರಿ ಅವರು, ವರಿಷ್ಠರ ಗಮನಕ್ಕೆ ತಂದಿದ್ದರು.
ಮುಖ್ಯಮಂತ್ರಿ ಸಲಹೆ ಪರಿಗಣಿಸಿರುವ ಎಐಸಿಸಿ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಬೆಂಗಳೂರಲ್ಲೇ ಬಿಡಾರ ಹೂಡಿರುವ, ಎಐಸಿಸಿ ಅಧ್ಯಕ್ಷ ಮಲ್ಲಿಕಾಜುನ್ ಖರ್ಗೆ ಅವರನ್ನು ಸಂಪರ್ಕಿಸಿ, ನಾಗೇಂದ್ರ ರಾಜೀನಾಮೆ ಪೊಡೆಯುವ ತೀರ್ಮಾನ ಕೈಗೊಂಡರು.
ವರಿಷ್ಠರ ತೀರ್ಮಾನದಂತೆ ಮುಖ್ಯಮಂತ್ರಿ ಅವರು, ನಾಗೇಂದ್ರ ಅವರನ್ನು ಸಂಪರ್ಕಿಸಿ, ರಾಜ್ಯಪಾಲರು ತೆಗೆದುಕೊಂಡಿರುವ ನಿಲುವು ಮತ್ತು ಎಐಸಿಸಿ ತೀರ್ಮಾನದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಮುಂದೆ ನಿಮಗೆ ಪಕ್ಷ ಒಳ್ಳೆಯ ಭವಿಷ್ಯ ರೂಪಿಸಲಿದೆ ಎಂಬ ಸಲಹೆ ನೀಡಿದರು.
ಮುಖ್ಯಮಂತ್ರಿ ಸಲಹೆ
ಮುಖ್ಯಮಂತ್ರಿ ಸಲಹೆಯಂತೆ ನಾಗೇಂದ್ರ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ.
ಈ ಹಿಂದೆ ನಿಗಮದ ಹಗರಣ ಬಯಲಾದ ಸಂದರ್ಭದಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ತೊರೆದು ಹೊರಬಂದು ಎಸ್ಐಟಿ, ಇ.ಡಿ. ಹಾಗೂ ಸಿಬಿಐ ತನಿಖೆ ಎದುರಿಸಿದ್ದರು.
ನಾಗೇಂದ್ರ ಅವರನ್ನು ಇ.ಡಿ. ಬಂಧಿಸಿ, ಜೈಲಿಗೂ ಕಳುಹಿಸಿತ್ತು, ನಂತರ ಜಾಮೀನು ಪಡೆದು ಹೊರ ಬಂದ ಅವರು, ಶಿವಕುಮಾರ್ ಸಂಪುಟದಲ್ಲಿ ಮಂತ್ರಿಯಾಗಿ ನೇಮಕೊಂಡಿದ್ದರು.
ಬಿಜೆಪಿ-ಜೆಡಿಎಸ್ ಹೋರಾಟ
ಮಂತ್ರಿಯಾಗಿ ನೇಮಕಗೊಂಡ ದಿನದಿಂದಲೇ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ, ಬಿಜೆಪಿ ಮತ್ತು ಜೆಡಿಎಸ್, ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಮತ್ತು ಹೊರಗೆ ಹೋರಾಟ ನಡೆಸಿದೆ.
ಅಲ್ಲದೆ, ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ, ಬಿಜೆಪಿ ಸೆಪ್ಟೆಂಬರ್ 1 ರಿಂದ 10 ದಿನಗಳ ಕಾಲ ರಾಯಚೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ.


