ದಂಡ ವಸೂಲಾತಿಗೆ ಸೂಕ್ತ ಕ್ರಮ: ಕೃಷ್ಣಬೈರೇಗೌಡ
ಬೆಳಗಾವಿ: ಅಕ್ರಮ ಕಲ್ಲು ಗಣಿಗಾರಿಕೆದಾರರಿಂದ 6,000 ಕೋಟಿ ರೂ. ದಂಡ ಬಾಕಿ ಉಳಿದಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನ ಪರಿಷತ್ತಿನಲ್ಲಿಂದು ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ನಾರಾಯಣಸ್ವಾಮಿ ಅವರ ಪ್ರಸ್ತವಾಕ್ಕೆ ಉತ್ತರಿಸಿದ ಸಚಿವರು, ರಾಜ್ಯಾದ್ಯಂತ ಬಹುತೇಕ ಕಲ್ಲು ಗಣಿಗಾರಿಕೆಗಳು ನಿಯಮ ಮೀರಿ ಕಾರ್ಯನಿರ್ವಹಿಸುತ್ತವೆ ಎಂದರು.
ಗಣಿಗಾರಿಕೆಗೆ ಪಾರದರ್ಶಕ ಕಾನೂನು
ಗಣಿಗಾರಿಕೆಗೆ ಪಾರದರ್ಶಕ ಕಾನೂನು ತರಲು ಸರ್ಕಾರ ಮುಂದಾಗಿರುವುದಲ್ಲದೆ, ಬೃಹತ್ ಬಾಕಿ ಮೊತ್ತವನ್ನು ವಸೂಲಿ ಮಾಡುವುದಾಗಿಯೂ ತಿಳಿಸಿದರು.
ಕಳೆದ ಮೂರು ವರ್ಷದಲ್ಲಿ ಅಧಿಕೃತ ಪರವಾನಗಿ ಇಲ್ಲದೆ ಕಲ್ಲು ಸಾಗಣೆ ಮಾಡಿದ ಆರೋಪದ ಮೇಲೆ 485 ಪ್ರಕರಣಗಳನ್ನು ದಾಖಲಿಸಿದ್ದು, 2,060 ಕೋಟಿ ರೂ. ದಂಡ ವಿಧಿಸಲಾಗಿದೆ.
ಹಿಂದಿನ ಸರ್ಕಾರಗಳು ಜನರಿಗೆ ಜಲ್ಲಿ ಮತ್ತು ಕಲ್ಲುಗಳು ಅಗತ್ಯ ಇದೆ ಎಂಬ ಕಾರಣಕ್ಕೆ ದಂಡ ವಸೂಲಿಗೆ ಕಠಿಣ ಕ್ರಮ ತೆಗೆದುಕೊಂಡಿರಲಿಲ್ಲ.
ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿಯವರೂ ಸಹ ಜನರ ಅವಶ್ಯಕತೆಗೆ ತಕ್ಕಂತೆ ಕಲ್ಲು ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಇಂತಹ ಬಾಕಿ ಹಣ ವಸೂಲಾತಿಗೆ ಕ್ರಮ ತೆಗೆದುಕೊಳ್ಳುವ ಸಂಬಂಧ ಈವರೆಗೆ ಎರಡು ಬಾರಿ ಕ್ಯಾಬಿನೆಟ್ ಉಪಸಮಿತಿ ಸಭೆ ನಡೆಸಿ ಚರ್ಚಿಸಿದೆ.
ಒಂದು ಬಾರಿಗೆ ಅನ್ವಯವಾಗುವಂತೆ ರಿಯಾಯಿತಿ
ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿರುವವರಿಗೆ ಒಂದು ಬಾರಿಗೆ ಅನ್ವಯವಾಗುವಂತೆ ರಿಯಾಯಿತಿ ನೀಡುವ ಬಗ್ಗೆ ಸದನದಲ್ಲೇ ಚರ್ಚಿಸಲಾಗಿದೆ.
ಪರವಾನಗಿ ಪಡೆದ ಕ್ವಾರಿ ಜಾಗದಲ್ಲಿ ಗಣಿಗಾರಿಕೆ ನಡೆಸಿದರೆ 1:1 ರ ಅನುಪಾತ ಹಾಗೂ ಪರವಾನಗಿ ಪ್ರದೇಶ ಮೀರಿ ಒತ್ತುವರಿ ಜಾಗದಲ್ಲಿ ಗಣಿಗಾರಿಕೆ ನಡೆಸಿದ್ದರೆ 1:2ರ ಅನುಪಾತದಲ್ಲಿ ದಂಡ ವಿಧಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದರೆ, ಈವರೆಗೆ ದಂಡ ವಸೂಲಿಯಾಗಿಲ್ಲ.
ಮುಂದಿನ ತಿಂಗಳು ಮತ್ತೊಂದು ಸಭೆ ನಡೆಸಿ ದಂಡ ವಸೂಲಾತಿ ಹಾಗೂ ಗಣಿಗಾರಿಕೆಗಳನ್ನು ಕಾನೂನು ಪಾರದರ್ಶಕತೆಯ ಅಡಿಯಲ್ಲಿ ತರಲು ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.


