ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು
ಬೆಂಗಳೂರು : ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಬಹುಕೋಟಿ ರೂ.ಗಳ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ಇಡಿ) ರಾಜ್ಯಪಾಲರನ್ನು ಕೋರಲಿದ್ದಾರೆ.
ಇದರ ನಡುವೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿತಮ್ಮ ಕುಟುಂಬದವರಿಗೆ ಬಿಡಿ ನಿವೇಶನ ಹಂಚಿಕೆ ಹಾಗೂ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ಖಾಸಗಿ ದೂರು ದಾಖಲಾಗಿದೆ.
ಮೈಸೂರಿನ ಆರ್ ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವರು ಶಾಸಕರು, ಸಂಸದರ ವಿರುದ್ಧದ ಕ್ರಿಮಿಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ಖಾಸಗಿ ದೂರನ್ನು ಪಡೆದಿರುವ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು, ದಾಖಲೆಗಳ ಪರಿಶೀಲನೆಗೆ ನೀಡಿದ್ದಾರೆ.
ದೂರಿನ ಬಗ್ಗೆ ನಾಳೆ ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲೆ ಲಕ್ಷ್ಮೀ ಅಯ್ಯಂಗಾರ್ ದೂರು ದಾಖಲಿಸಿದ್ದು, ಇದರ ಪರವಾಗಿ ಮತ್ತೊಬ್ಬ ಹಿರಿಯ ನ್ಯಾಯವಾದಿ ವಸಂತಕುಮಾರ್ ಅವರು ವಕಾಲತ್ತು ವಹಿಸಿದ್ದಾರೆ.
ಮುಡಾ ಬಿಡಿ ನಿವೇಶನಗಳ ಹಗರಣಕ್ಕೆ ಸಂಬಂಧಿಸಿದಂತೆ ರೈತ ಸಂಘಟನೆಗಳು ಹಾಗೂ ಅಬ್ರಾಹಂ ಎಂಬುವರು ತಮಗೆ ನೀಡಿದ ದೂರಿನ ಆಧಾರದ ಮೇಲೆ ನಿಮ್ಮ ವಿರುದ್ಧ ಪ್ರಾಸಿಕ್ಯೂಸನ್ ಗೆ ಅನುಮತಿ ನೀಡಬಾರದೇಕೆ ಎಂದು ರಾಜ್ಯಪಾಲರು ಮುಖ್ಯಮಂತ್ರಿ ಅವರಿಗೆ ಈಗಾಗಲೇ ನೋಟಿಸ್ ನೀಡಿ ಅದಕ್ಕೆ ಉತ್ತರವನ್ನು ಪಡೆದಿದ್ದಾರೆ.
ಸರ್ಕಾರದಿಂದ ಉತ್ತರ ಬಂದ ನಂತರ ರಾಜ್ಯಪಾಲರು ನಿರಂತರವಾಗಿ ಸಮಾಲೋಚನೆ ನಡೆಸಿ ಪ್ರಾಸಿಕ್ಯೂಷನ್ ನೀಡುವುದು ಸೇರಿದಂತೆ ವಿವಿಧ ಮಾರ್ಗಗಳಲ್ಲಿ ತನಿಖೆ ನಡೆಸುವ ಸಾಧ್ಯಾಸಾಧ್ಯತೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಇದರ ನಡುವೆಯೇ ಇಡಿಯು ವಾಲ್ಮೀಕಿ ನಿಗಮದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್ ಕೇಳಲು ಸಿದ್ಧತೆ ಮಾಡಿಕೊಂಡಿದೆ ಎಂಬ ವಿಚಾರ ಸರ್ಕಾರದ ಮಟ್ಟದಲ್ಲಿಯೇ ಕೇಳಿಬಂದಿದೆ.
ಹಣಕಾಸು ಇಲಾಖೆಯನ್ನು ಮುಖ್ಯಮಂತ್ರಿ ಅವರೇ ಹೊಂದಿದ್ದಾರೆ. ಅವರ ಗಮನಕ್ಕೆ ಬಾರದೇ ಸರ್ಕಾರಿ ಸ್ವಾಮ್ಯದ ನಿಗಮದಲ್ಲಿ ಇಷ್ಟು ದೊಡ್ಡ ಪ್ರಮಾಣದ ಅವ್ಯವಹಾರ ಸಾಧ್ಯವೇ?
ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ಹೊಣೆ ಹೊತ್ತಿದ್ದ ಮಾಜಿ ಸಚಿವ ಹಾಗೂ ಶಾಸಕ ಬಿ. ನಾಗೇಂದ್ರ ಸೇರಿದಂತೆ ಕೆಲವು ಮಧ್ಯರ್ತಿಗಳನ್ನು ಈಗಾಗಲೇ ಇಡಿ ತನ್ನ ವಶಕ್ಕೆ ತೆಗೆದುಕೊಂಡಿದೆ. ವಶಕ್ಕೆ ತೆಗೆದುಕೊಳ್ಳುವುದರ ಜತೆಗೆ ನಾಗೇಂದ್ರ ಅವರ ಪತ್ನಿ ಸೇರಿದಂತೆ ಕೆಲವರನ್ನು ಕರೆಸಿ ವಿಚಾರಣೆಯನ್ನು ಮಾಡಿದೆ.
ಬಂಧಿತರು ನೀಡಿರುವ ಅಂಕಿ-ಅಂಶಗಳು ಹಾಗೂ ಕೆಲವು ದಾಖಲೆಗಳನ್ನು ಆಧರಿಸಿ ಪರಿಶೀಲನೆ ನಡೆಸಿ ಇಂತಹ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಈ ಬೆಳವಣಿಗೆ ನಡೆಯುತ್ತಿದ್ದಂತೆ ಎಸ್ಐಟಿಯು ಕಾಂಗ್ರೆಸ್ ಶಾಸಕರಾದ ನಾಗೇಂದ್ರ ಮತ್ತು ಬಸನಗೌಡ ದದ್ದಲ್ ಅವರನ್ನು ಹೊರಗಿಟ್ಟು 12 ಮಂದಿಯ ವಿರುದ್ಧ ಪ್ರಾಥಮಿಕ ಚಾರ್ಜ್ ಶೀಟನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.


