ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಂಪುಟ ಉಪಸಮಿತಿ
ಬೆಂಗಳೂರು : ಕೋವಿಡ್ ನಿರ್ವಹಣೆ ಹೆಸರಿನಲ್ಲಿ ನಡೆದ ಅಕ್ರಮಗಳ ಕುರಿತು ಎಸ್‌ಐಟಿಯಿಂದ ತನಿಖೆ ನಡೆಸಲು ರಾಜ್ಯ ಸಚಿವ ಸಂಪುಟ ಇಂದಿಲ್ಲಿ ತೀರ್ಮಾನಿಸಿದೆ. ಅವ್ಯವಹಾರಗಳ ಕುರಿತು ಸಮಗ್ರವಾಗಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ.
ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ.ಪಾಟೀಲ್, ಕೋವಿಡ್ ನಿರ್ವಹಣೆಯಲ್ಲಿನ ಹಗರಣಗಳ ಬಗ್ಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಾನ್‌ಮೈಕಲ್ ಕುನ್ಹ ನೇತೃತ್ವದ ಆಯೋಗ ನೀಡಿರುವ ಮಧ್ಯಂತರ ವರದಿ ಆಧರಿಸಿ ಸಂಪುಟ ಈ ತೀರ್ಮಾನ ಕೈಗೊಂಡಿದೆ ಎಂದರು.
ಈ ಅಕ್ರಮದಲ್ಲಿ ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಭಾಗಿಯಾಗಿರುವುದರಿಂದ ಎರಡು ಹಂತದಲ್ಲಿ ತನಿಖೆ ನಡೆಸಲಾಗುವುದು. ಹಗರಣದಲ್ಲಿ ಅಪರಾಧ ಕೃತ್ಯ ನಡೆದಿರುವುದರಿಂದ ಎಸ್‌ಐಟಿ ರಚನೆ ಮಾಡಿದ್ದಾರೆ. ಅವರು, ಆರೋಪಿಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿ ನ್ಯಾಯಮೂರ್ತಿಗಳ ವರದಿಯಂತೆ 500 ಕೋಟಿ ರೂ. ವಸೂಲಿಗೆ ತಕ್ಷಣವೇ ಕ್ರಮ ಕೈಗೊಳ್ಳಲಿದ್ದಾರೆ.
ಎಸ್‌ಐಟಿ ಮುಖ್ಯಸ್ಥರು ಯಾರಾಗಬೇಕು ಮತ್ತು ಉಪಸಮಿತಿಯಲ್ಲಿ ಯಾರಿರಬೇಕು ಎಂಬುದನ್ನು ತೀರ್ಮಾನಿಸುವ ಅಧಿಕಾರವನ್ನು ಸಂಪುಟ ಮುಖ್ಯಮಂತ್ರಿ ಅವರಿಗೆ ನೀಡಿದೆ. ಒಟ್ಟಾರೆ, 7000 ಕೋಟಿ ರೂ.ಗೂ ಹೆಚ್ಚು ಮೊತ್ತದ ಅವ್ಯವಹಾರ ನಡೆದಿದೆ. ಇದರಲ್ಲಿ 500 ಕೋಟಿ ರೂ. ವಸೂಲಿ ಮಾಡಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ 31 ಜಿಲ್ಲೆಗಳ ಮಾಹಿತಿ ಸಂಗ್ರಹ ಬಾಕಿ ಇದೆ ಎಂದರು.
ಬಿಬಿಎಂಪಿಯ ನಾಲ್ಕು ವಲಯಗಳು ವರದಿ ನೀಡಬೇಕು. ಈಗಾಗಲೇ ಆಯೋಗ 55000 ಕಡತಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ಪರಿಶೀಲಿಸಿ ವರದಿ ನೀಡಿದೆ. ವರದಿ ಆಧಾರದ ಮೇಲೆ ಹಗರಣದಲ್ಲಿ ಭಾಗಿಯಾದ ಕಂಪನಿಗಳು, ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ. ವಿವಿಧ ಪೋಲಿಸ್ ಠಾಣೆಗಳಲ್ಲಿ ಇದ್ದ 43 ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ಸಭೆ ನಿರ್ಧರಿಸಿದೆ ಎಂದು ಹೇಳಿದರು.
ಗಣಿಗಾರಿಕೆ ಅಕ್ರಮಗಳ ತನಿಖೆಗಾಗಿ ಲೋಕಾಯುಕ್ತ ಕಾರ್ಯಾವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ. 113 ಅಕ್ರಮ ಗಣಿಗಾರಿಕೆ ಪ್ರಕರಣಗಳಿವೆ. 8 ಪ್ರಕರಣಗಳಲ್ಲಿ ಸಿಆರ್‌ಪಿಸಿ ಬಾಕಿ ಇದೆ. 6 ಪ್ರಕರಣಗಳು ತನಿಖಾ ಹಂತದಲ್ಲಿವೆ, ಹೀಗಾಗಿ ಲೋಕಾಯುಕ್ತ ತನಿಖಾ ಅವಧಿಯನ್ನು ವಿಸ್ತರಿಸಲಾಗಿದೆ ಎಂದರು.
577 ಕೋಟಿ ರೂ. ವೆಚ್ಚದಲ್ಲಿ ರೇಷ್ಮೆ ಭವನವನ್ನು ರಾಜಧಾನಿಯ ಓಕಳಿಪುರಂನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರರ ಮೃಣಾಲ್ ಶುಗರ್ ಕಂಪನಿಗೆ ಧಾರವಾಡದ 19 ಗ್ರಾಮಗಳ ಕಬ್ಬು ಬೆಳೆ ಸಾಗಣೆಗೆ ಪರವಾನಗಿ ನೀಡಲಾಗಿದೆ ಎಂದು ಅವರು ತಿಳಿಸಿದರು.


