ಬೆಂಗಳೂರು:ಕರ್ನಾಟಕದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ, ಅನೇಕ ಜನಪರ ಯೋಜನೆಗಳನ್ನು ನಿಲ್ಲಿಸಿದ್ದಾರೆ, ಯೋಜನೆಗಳಿಗೆ ಹಣ ಕೊಡುವ ಯೋಗ್ಯತೆ ಇಲ್ಲ, ಸರ್ಕಾರ ದಿವಾಳಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟೀಕಿಸಿದ್ದಾರೆ.
ಚನ್ನಪಟ್ಟಣ ಉಪಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆ ನಿಲ್ಲಿಸಿದ್ದಾರೆ, ಒಂದು ರಸ್ತೆ ಗುಂಡಿ ಮುಚ್ಚುವ ಯೋಗ್ಯತೆಯೂ ಈ ಸರ್ಕಾರಕ್ಕೆ ಇಲ್ಲ ಎಂದರು.
ಕಾಂಗ್ರೆಸ್ ಕೈಗೊಂಬೆ ಯೋಗೇಶ್ವರ್
ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಕ್ಕ ಪಾಠ ಕಲಿಸಬೇಕು, ಬೊಂಬೆಗಳ ನಾಡಲ್ಲಿ ಕಾಂಗ್ರೆಸ್ ಕೈಗೊಂಬೆಯಾಗಿರುವ ಸಿ.ಪಿ.ಯೋಗೇಶ್ವರ್ ಗೆಲ್ಲುವುದರಿಂದ ಪ್ರಯೋಜನವಿಲ್ಲ.
ಕಾಲ ಬದಲಾಗಿದೆ, ಜನ ಎಲ್ಲವನ್ನು ಯೋಚನೆ ಮಾಡುತ್ತಾರೆ, ಕೇಂದ್ರದಲ್ಲಿ ದೇವೇಗೌಡರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಸ್ನೇಹ ಯಾವ ರೀತಿ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ.
ನಿಖಿಲ್ ಗೆಲುವಿಗೆ ಮನೆ-ಮನೆಗೆ ಹೋಗಿ ಪ್ರಚಾರ ಮಾಡಿ, ಪ್ರಾಮಾಣಿಕ ಕೆಲಸ ಮಾಡಿದರೆ 25 ಸಾವಿರಕ್ಕೂ ಹೆಚ್ಚಿನ ಮತಗಳಿಂದ ಗೆಲ್ಲುತ್ತಾರೆ, ನಿಮ್ಮ ಸೇವೆ ಮಾಡುವುದಕ್ಕೆ ಅವಕಾಶ ಮಾಡಿ ಎಂದು ಮನವಿ ಮಾಡಿದರು.


