ಬೆಳಗಾವಿ:ಮೀಸಲಾತಿಗೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದ ಪಂಚಮಸಾಲಿ ಲಿಂಗಾಯತ ಸಮುದಾಯದವರ ಮೇಲೆ ಪೋಲಿಸ್ ಲಾಠಿ ಚಾರ್ಜ್ ಖಂಡಿಸಿ ರಾಜ್ಯ ಬಿಜೆಪಿ ಬೆಳಗಾವಿ ಸುವರ್ಣ ವಿಧಾನಸೌಧದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಇಂದು ಪ್ರತಿಭಟನೆ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪಂಚಮಸಾಲಿ ಸಮುದಾಯದವರು ಹೋರಾಟ ನಡೆಸುತ್ತಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸುವರ್ಣಸೌಧದಲ್ಲೇ ಇದ್ದರೂ ಪ್ರತಿಭಟನಕಾರರನ್ನು ಭೇಟಿ ಮಾಡಲಿಲ್ಲ, ಹೋರಾಟದ ಸ್ಥಳಕ್ಕೆ ತೆರಳಿ ಮನವಿ ಸ್ವೀಕರಿಸಬಹುದಿತ್ತು ಎಂದರು.
ಅಕ್ಷಮ್ಯ ಅಪರಾಧ
ಹೋರಾಟದ ನೇತೃತ್ವ ವಹಿಸಿದ್ದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿ ಮಾಡುವ ಸೌಜನ್ಯವನ್ನೂ ತೋರಲಿಲ್ಲ, ಬದಲಿಗೆ ಶಾಂತಿಯುತ ಹೋರಾಟ ಮಾಡುತ್ತಿದ್ದ ಅಮಾಯಕರ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದು ಅಕ್ಷಮ್ಯ ಅಪರಾಧ.
ಚನ್ನಮ್ಮನ ನಾಡಿನಲ್ಲಿ ಹೋರಾಟಗಾರರ ಮೇಲೆ ನಡೆದ ಲಾಠಿ ಚಾರ್ಜ್ ಮುಖ್ಯಮಂತ್ರಿ ಅವರ ನಡವಳಿಕೆ, ಅಧಿಕಾರದ ದರ್ಪ ತೋರುತ್ತದೆ, ದರ್ಪ ಮೆರೆದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ದುರಹಂಕಾರದ ನಡೆ
ಕಾಂಗ್ರೆಸ್ ಸರ್ಕಾರ 139 ಶಾಸಕರಿದ್ದೇವೆ ಎಂಬ ಕಾರಣಕ್ಕೆ ದುರಹಂಕಾರದಿಂದ ನಡೆದುಕೊಳ್ಳುತ್ತಿದೆ, ಅಧಿಕಾರ ಶಾಶ್ವತ ಎಂಬ ಭ್ರಮೆ ಇದ್ದಂತಿದೆ, ಸಿದ್ದರಾಮಯ್ಯ ಹಿಂದಿನ ಆಡಳಿತಾವಧಿಯಲ್ಲೂ ಇದೇ ರೀತಿ ನಡೆದುಕೊಂಡಿದ್ದಾರೆ.
ಸರ್ಕಾರದ ಈ ಕ್ರಮವನ್ನು ಸದನದ ಒಳಗೆ ಮತ್ತು ಹೊರಗೆ ಪ್ರಶ್ನಿಸಲಾಗುವುದು, ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಹೋರಾಟ ನಡೆಸಲಿವೆ ಎಂದರು.
ಪ್ರತಿಭಟನಕಾರರು, ಕಾಂಗ್ರೆಸ್ ಸರರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ವಿಧಾನಮಂಡಲದ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವರು, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಪಾಲ್ಗೊಂಡಿದ್ದರು.


