ಬೆಂಗಳೂರು:ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ರಾಜ್ಯ ಭೇಟಿ ಬೆನ್ನಲ್ಲೇ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷದ ಶಾಸಕರನ್ನು ತಮ್ಮೆಡೆಗೆ ಸೆಳೆಯಲು ಸಭೆ ನಡೆಸಿದರು.
ಶಾಸಕರ ಸಭೆ ನಂತರ ನಡೆದ ಮುಖಂಡರ ಸಭೆಯಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.
ಚುನಾವಣಾ ಅಕ್ರಮ ಬಯಲು ಮಾಡುವ ಉದ್ದೇಶದಿಂದ ರಾಹುಲ್ ಗಾಂಧಿ ಆಗಸ್ಟ್ 8ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
ಮತಗಳ್ಳತನ ಮಾಹಿತಿ
ಸಭೆಯಲ್ಲೇ ಬೆಂಗಳೂರು ಸೆಂಟ್ರಲ್ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದ ಕುರಿತು ಮಾಹಿತಿ ಬಹಿರಂಗ ಪಡಿಸಲಿದ್ದಾರೆ.
ನಂತರ ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಮುಖಂಡರ ನಿಯೋಗ ರಾಜ್ಯ ಮುಖ್ಯಚುನಾವಣಾಧಿಕಾರಿ ಭೇಟಿ ಮಾಡಿ ದಾಖಲೆ ಸಹಿತ ದೂರು ನೀಡಲಿದ್ದಾರೆ.
ರಾಹುಲ್ ಸಮಾವೇಶ ಯಶಸ್ಸಿನ ಉದ್ದೇಶದಿಂದ ಶಿವಕುಮಾರ್ ಕಳೆದ ಎರಡು ದಿನಗಳಿಂದ ಕಾರ್ಯಕರ್ತರು ಹಾಗೂ ಮುಖಂಡರ ನಿರಂತರ ಸಭೆ ನಡೆಸಿದರು.
ಶಾಸಕರ ಮುಖಾಮುಖಿ ಭೇಟಿ
ಇದೇ ವಿಷಯ ಮುಂದಿಟ್ಟುಕೊಂಡು ಪಕ್ಷದ ಶಾಸಕರ ಸಭೆ ಕರೆದು, ಖುದ್ದಾಗಿ ಎಲ್ಲರನ್ನು ಮುಖಾಮುಖಿ ಭೇಟಿ ಮಾಡಿ, ವಿಶ್ವಾಸ ಗಳಿಸುವ ಪ್ರಯತ್ನ ಮಾಡಿದರು.
ಶುಕ್ರವಾರ ನಡೆಯುವ ರಾಹುಲ್ ಸಭೆಗೆ ತಮ್ಮ ಕ್ಷೇತ್ರಗಳಿಂದ ಕಾರ್ಯಕರ್ತರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಪಕ್ಷಕ್ಕೆ ದುಡಿದಿರುವ ಗಣ್ಯರನ್ನು ಕರೆತರುವಂತೆ ಶಾಸಕರಿಗೆ ಆದೇಶಿಸಿದರು.
ಸಭೆಯ ಸ್ವರೂಪದ ಬಗ್ಗೆ ವಿವರಿಸಿ ರಾಹುಲ್ ಗಾಂಧಿ ತೆಗೆದುಕೊಂಡಿರುವ ದಿಟ್ಟ ನಿರ್ಧಾರಕ್ಕೆ ನಾವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಬೇಕಿದೆ ಎಂದರು.

ಸಭೆಯಲ್ಲಿ ಮುಖ್ಯಮಂತ್ರಿ
ಶಾಸಕರ ಜೊತೆ ಚರ್ಚೆ ನಂತರ ಅವರನ್ನೂ ಕೂರಿಸಿಕೊಂಡು ಪಕ್ಷದ ಕಚೇರಿಯಲ್ಲೇ ಸಭೆ ನಡೆಸಿದರು, ಈ ಸಭೆಯಲ್ಲಿ ಮುಖ್ಯಮಂತ್ರಿ ಅಲ್ಲದೆ, ಇತರ ಮುಖಂಡರೂ ಭಾಗವಹಿಸಿದ್ದರು.
ಕಳೆದ ವಾರ ದೆಹಲಿಯಿಂದ ಹಿಂತಿರುಗುತ್ತಿದ್ದಂತೆ ಸಿದ್ದರಾಮಯ್ಯ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮೂರು ದಿನಗಳ ಕಾಲ ಪಕ್ಷದ ಜಿಲ್ಲಾವಾರು ಶಾಸಕರ ಸಭೆ ನಡೆಸಿದ್ದು, ಇದರಲ್ಲಿ ಸಚಿವರೂ ಪಾಲ್ಗೊಂಡಿದ್ದರು.
ಆ ಸಭೆಗೆ ಉಪಮುಖ್ಯಮಂತ್ರಿ ಅವರಿಗೆ ಆಹ್ವಾನ ಇರಲಿಲ್ಲ. ಆದರೆ, ಶಿವಕುಮಾರ್ ಎರಡು ದಿನಗಳ ಕಾಲ ವಿಧಾನಸೌಧದಲ್ಲೇ ಇಲಾಖಾ ಪ್ರಗತಿ ಸಭೆಗಳನ್ನು ನಡೆಸಿದ್ದರು.
ನಮ್ಮ ಮೆಟ್ರೋಗೆ ಪ್ರಧಾನಿ ಚಾಲನೆ
ಪ್ರಧಾನಿ ನರೇಂದ್ರ ಮೋದಿ ನಗರದಲ್ಲಿ ಭಾನುವಾರ ಮೂರನೇ ಹಂತದ ನಮ್ಮ ಮೆಟ್ರೋ ಹಳದಿ ಮಾರ್ಗ ಸಂಚಾರಕ್ಕೆ ಚಾಲನೆ ನೀಡುವುದರ ಜೊತೆಗೆ ಕೇಂದ್ರದ ಹಲವು ಅಭಿವೃದ್ಧಿ ಯೋಜನೆಗಳಿಗೂ ಹಸಿರು ನಿಶಾನೆ ತೋರಲಿದ್ದಾರೆ.
ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶಿವಕುಮಾರ್, ಪ್ರಧಾನಿ ಕಾರ್ಯಕ್ರಮದ ಬಗ್ಗೆಯೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.



