ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಪುನರ್ ರಚನೆ ಪ್ರಯತ್ನಕ್ಕೆ ಕಾಂಗ್ರೆಸ್ ವರಿಷ್ಠರು ತಡೆ ಹಾಕಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ನವೆಂಬರ್ 14ರಂದು ಪ್ರಕಟಗೊಳ್ಳವವರೆಗೂ ಕರ್ನಾಟಕ ಕಾಂಗ್ರೆಸ್‌ನ ಯಾವ ನಾಯಕರೂ ದೆಹಲಿ ಕಡೆ ಮುಖ ಮಾಡುವುದು ಬೇಡ ಎಂದಿದ್ದಾರೆ.
ಇಂಡಿಯಾ ಮೈತ್ರಿ ಅಭ್ಯರ್ಥಿ ಪರ ಪ್ರಚಾರ
ಚುನಾವಣಾ ಪ್ರಚಾರಕ್ಕೆ ಪಕ್ಷ ಯಾರನ್ನು ನಿಯೋಜಿಸುತ್ತದೋ ಅವರು ಇಂಡಿಯಾ ಮೈತ್ರಿ ಕೂಟದ ಅಭ್ಯರ್ಥಿಗಳ ಪರ ಮತಯಾಚಿಸಿ ಎಂದಿದೆ.
ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತದೆ ಎಂಬ ಚರ್ಚೆಗಳಿಗೆ ತೆರೆ ಎಳೆಯಲು ಸಿದ್ದರಾಮಯ್ಯ ತಮ್ಮ ಮಂತ್ರಿಮಂಡಲವನ್ನು ದೊಡ್ಡ ಪ್ರಮಾಣದಲ್ಲಿ ಪುನರ್ ರಚಿಸಲು ಕೈಹಾಕಿದ್ದರು.
ಅನುಮತಿಗೆ ಮನವಿ
ಈ ಉದ್ದೇಶಕ್ಕಾಗಿಯೇ ಸಿದ್ದರಾಮಯ್ಯ ಎಐಸಿಸಿ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸಂಪರ್ಕಿಸಿ ಪುನರ್ ರಚನೆಗೆ ಅನುಮತಿ ಕೊಡಿಸುವಂತೆ ಮನವಿ ಮಾಡಿದ್ದರು.
ಮಂತ್ರಿಮಂಡಲ ವಿಸ್ತರಣೆ ಅಥವಾ ಪುನರ್ ರಚನೆ ನಿಮ್ಮ ವಿವೇಚನೆಗೆ ಬಿಟ್ಟಿದ್ದು, ನೀವು ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಸಮಾಲೋಚನೆ ನಡೆಸಿ ಎಂದಿದ್ದರು.
ಇದೇ ಸಂದರ್ಭದಲ್ಲಿ ಸಚಿವರ ಕಾರ್ಯವೈಖರಿ, ಬಿಜೆಪಿ ಮತ್ತು ರಾಜ್ಯ ಗುತ್ತಿಗೆದಾರರು ಮಾಡುತ್ತಿರುವ ಆರೋಪಗಳ ಬಗ್ಗೆ ಹೆಚ್ಚಿನ ಗಮನಹರಿಸಿ, ಇದು ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುತ್ತಿದೆ.
ಸಂಬಂಧಪಟ್ಟವರ ಮೇಲೆ ಕ್ರಮ
ರಾಜ್ಯ ಗುತ್ತಿಗೆದಾರರ ಸಂಘ ಮಾಡಿರುವ ಕಮಿಷನ್ ಆರೋಪವನ್ನೇ ಬಿಜೆಪಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದೆ, ನೀವು ಸಂಬಂಧಪಟ್ಟವರ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ.
ಇದರಲ್ಲಿ ಸಚಿವರ ಪಾತ್ರವೋ, ಮಧ್ಯವರ್ತಿಗಳ ಪಾತ್ರವೂ ಎಂಬುದನ್ನು ಪತ್ತೆ ಮಾಡಿ ಮೊದಲು ಕಡಿವಾಣ ಹಾಕಿ ಎಂದು ವೇಣುಗೋಪಾಲ್ ಮುಖ್ಯಮಂತ್ರಿ ಅವರಿಗೆ ಕಿವಿಮಾತು ಹೇಳಿದ್ದಾರೆ.
ವೇಣುಗೋಪಾಲ್ ಸಲಹೆ ನಂತರ ಮುಖ್ಯಮಂತ್ರಿ ನಿನ್ನೆ ಸಂಪುಟ ಸಭೆ ನಂತರ ನಡೆದ ಅನೌಪಚಾರಿಕ ಸಭೆಯಲ್ಲಿ ಗುತ್ತಿಗೆದಾರರ ಆರೋಪವನ್ನು ವರಿಷ್ಟರು ಗಂಭೀರವಾಗಿ ತೆಗೆದುಕೊಂಡಿರುವುದನ್ನು ಸಹೋದ್ಯೋಗಿಗಳಿಗೆ ವಿವರಿಸಿದ್ದಾರೆ.
ಔತಣಕೂಟ ಸಭೆ
ಇದೂ ಸೇರಿದಂತೆ ಕೆಲವು ವಿಚಾರಗಳ ಬಗ್ಗೆ ಚರ್ಚಿಸುವ ಉದ್ದೇಶದಿಂದಲೇ ನಾನು ಔತಣಕೂಟ ಸಭೆ ಇಟ್ಟುಕೊಂಡಿದ್ದು, ಅಲ್ಲಿ ಎಲ್ಲರೂ ಮುಕ್ತವಾಗಿ ಚರ್ಚೆ ಮಾಡಿ, ಸರ್ಕಾರ ಮತ್ತು ಪಕ್ಷದ ವರ್ಚಸ್ಸು ಹೆಚ್ಚಿಸಲು ಕಾರ್ಯಕ್ರಮ ರೂಪಿಸೋಣ ಎಂದಿದ್ದಾರೆ.
ಸಂಪುಟ ವಿಸ್ತರಣೆಗೆ ಎಐಸಿಸಿ ನಿರಾಕರಿಸಿದ ಮಾಹಿತಿ ತಿಳಿಯುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪುನರ್ ರಚನೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಅದು ಮುಖ್ಯಮಂತ್ರಿ ಹಾಗೂ ವರಿಷ್ಟರಿಗೆ ಬಿಟ್ಟ ವಿಚಾರ ಎಂದು ಹೇಳುವ ಮೂಲಕ ಜಾರಿಕೊಂಡಿದ್ದರು.


