ರಾಹುಲ್ ಸೂಚಿಸಿದರೆ ಒಂದು ನಿಮಿಷವೂ ಕುರ್ಚಿಯಲ್ಲಿ ಇರುವುದಿಲ್ಲ: ಸಿದ್ದರಾಮಯ್ಯ
ಬೆಂಗಳೂರು:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಧಿಕಾರ ಬಿಡುವಂತೆ ಸಲಹೆ ಮಾಡಿದರೆ ಒಂದು ನಿಮಿಷವೂ ಕುರ್ಚಿಯಲ್ಲಿ ಇರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತ ಬಳಗದ ಮುಂದೆ ಹೇಳಿಕೊಂಡಿದ್ದಾರೆ.
ಮೇ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕತ್ವದ ಬಗ್ಗೆ ರಾಹುಲ್ ಗಾಂಧಿ ತೀರ್ಮಾನ ಕೈಗೊಳ್ಳುತ್ತಾರೆ.
ಹೈಕಮಾಂಡ್ ನಿರ್ಧಾರಕ್ಕೆ ಬದ್ಧ
ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಗುರುವಾರ ರಾತ್ರಿ ತಮ್ಮ ಆಪ್ತ ಸಚಿವರ ನಿವಾಸದಲ್ಲಿ ಸೇರಿದ್ದ ಮುಖಂಡರ ಸಭೆಯಲ್ಲಿ ಮುಂದಿನ ರಾಜಕೀಯ ಬೆಳವಣಿಗೆ ಕುರಿತು ಮಾಹಿತಿ ನೀಡಿದ್ದಾರೆ.
ಬೈರತಿ ಸುರೇಶ್ ಆಯೋಜಿಸಿದ್ದ ಸಭೆಯಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್, ಡಾ.ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್, ಜಮೀರ್ ಅಹಮದ್ ಖಾನ್, ಮಾಜಿ ಸಚಿವ ಕೆ.ಎನ್.ರಾಜಣ್ಣ ಉಪಸ್ಥಿತರಿದ್ದರು.
ಸಭೆ ನಂತರ ತಮ್ಮ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಸಚಿವರೊಬ್ಬರು, ಮೇನಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಮಹತ್ತರ ಬದಲಾವಣೆ ಆಗಲಿದೆ ಎಂಬ ಸುಳಿವನ್ನು ಮುಖ್ಯಮಂತ್ರಿ ಅವರೇ ನೀಡಿದ್ದಾರೆ.
ಅರ್ಧದಷ್ಟು ಸಚಿವರ ಕೈಬಿಡಲು ನಿರ್ಧಾರ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆದರೂ ಅಥವಾ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದರೂ, ಹಾಲಿ ಮಂತ್ರಿಮಂಡಲದಲ್ಲಿನ 15 ರಿಂದ 17 ಸಚಿವರನ್ನು ಕೈಬಿಡಲು ಎಐಸಿಸಿ ನಿರ್ಧರಿಸಿದೆ.
ಸಚಿವರಾಗಿ ಮುಂದುವರೆಯಲು ಇಚ್ಛಿಸುವವರು ತಮ್ಮ ಶಕ್ತಿ ಮತ್ತು ಪ್ರಭಾವ ಬಳಿಸಿಕೊಳ್ಳಿ ಎಂದು ಸಭೆಯಲ್ಲಿ ಮುಖ್ಯಮಂತ್ರಿ ನಮಗೆ ಸ್ಪಷ್ಟ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮಧ್ಯೆಪ್ರವೇಶಿಸಿದ ಡಾ.ಪರಮೇಶ್ವರ್, ಡಾ.ಮಹದೇವಪ್ಪ ಮತ್ತು ಗುಂಡೂರಾವ್ ನೀವೇ ಈ ರೀತಿ ಅಸಹಾಯಕತೆ ವ್ಯಕ್ತಪಡಿಸಿದರೆ, ನಿಮ್ಮನ್ನು ನಂಬಿರುವ ನಮ್ಮ ಸ್ಥಿತಿ ಏನು ಎಂದು ಪ್ರಶ್ನಿಸಿದರು.
ಈಗ ಏನೂ ನಡೆಯಲ್ಲಾ
ಇದಕ್ಕೆ ಸಿದ್ದರಾಮಯ್ಯ, ಅದೆಲ್ಲಾ ಈಗ ಏನೂ ನಡೆಯಲ್ಲಾ, ರಾಹುಲ್ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ, ಅವರ ನಿರ್ಧಾರದ ಮುಂದೆ ಯಾವ ಅಸಹಾಯಕತೆ ಆಗಲಿ, ಇನ್ನೊಂದಾಗಲಿ ಇರುವುದಿಲ್ಲ.
ನೀವು ಸಚಿವರಾಗಿ ಉಳಿಯಬೇಕೆಂದರೆ ನಿಮ್ಮ ಸಾಮರ್ಥ್ಯದಿಂದ ಮಾತ್ರ ಸಾಧ್ಯ ಎನ್ನುವ ಮೂಲಕ ಕೈಚೆಲ್ಲಿದ್ದಾರೆ.
ಆಗ ಕೆಲವರು, ನಿಮಗೆ ಶಕ್ತಿ ಇದೆ, ನಿಮ್ಮ ಮಾತಿಗೆ ರಾಹುಲ್ ಒಪ್ಪುತ್ತಾರೆ, ಅಧಿಕಾರ ಬಿಡುವ ಮಾತುಗಳನ್ನು ಆಡಬೇಡಿ, ಮುಖ್ಯಮಂತ್ರಿಯಾಗಿ ಮುಂದುವರೆಯಲು ಏನು ಅಗತ್ಯವಿದೆಯೋ ಅದನ್ನು ಮಾಡಿ, ನಿಮ್ಮ ಹಿಂದೆ ದೊಡ್ಡ ಶಾಸಕರ ಹಿಂಡೇ ಇದೆ ಎಂದು ರಾಜಣ್ಣ ಬಲ ತುಂಬಿದ್ದಾರೆ.
ನಿಮ್ಮನ್ನು ಎಚ್ಚರಿಸಿದ್ದೇನೆ
ಇದಕ್ಕೆ, ’ಏ, ರಾಜಣ್ಣ, ಅದೆಲ್ಲಾ ಏನೂ ನಡೆಯಲ್ಲ, ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕಾಗುತ್ತದೆ, ನಾನು ಮುಂದಿನ ರಾಜಕೀಯ ಬೆಳವಣಿಗೆ ತಿಳಿಸಿದ್ದೇನೆ, ನಿಮ್ಮನ್ನು ಎಚ್ಚರಿಸಿದ್ದೇನೆ ಎಂದಿದ್ದಾರೆ ಸಿದ್ದರಾಮಯ್ಯ.
ಈ ಮಧ್ಯೆ ಶಿವಕುಮಾರ್, ಕಳೆದ ಎರಡು ದಿನಗಳಿಂದ ದೆಹಲಿಯಲ್ಲೇ ಬಿಡಾರ ಹೂಡಿ ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರ ಕುರಿತಂತೆ ಸ್ಪಷ್ಟ ನಿಲುವು ತಿಳಿಸಿ ಎಂದು ಹೈಕಮಾಂಡ್ ಮುಂದೆ ಪಟ್ಟು ಹಿಡಿದಿದ್ದಾರೆ.
ಕೆಲಸ ಮಾಡಿದ್ದೇನೆ, ಕೂಲಿ ಕೊಡಿ, ನೀವು ಹೇಳಿದಂತೆ ನನಗೆ ಅಧಿಕಾರ ಹಸ್ತಾಂತರ ಮಾಡಿಸಿ, ಇನ್ನೂ ಹೆಚ್ಚಿನ ವಿಳಂಬ ಸಹಿಸುವುದಿಲ್ಲ ಎಂದಿದ್ದಾರೆ.
ವರಿಷ್ಠ ನಾಯಕರ ಭೇಟಿ
ಕಳೆದ ರಾತ್ರಿ ವರಿಷ್ಠ ನಾಯಕರಾದ ಮುಕುಲ್ ವಾಸ್ನಿಕ್, ಸಚಿನ್ ಪೈಲೆಟ್, ರಣದೀಪ್ ಸಿಂಗ್ ಸುರ್ಜೇವಾಲ, ಜೈರಾಮ್ ರಮೇಶ್, ಜಿತೇಂದ್ರ ಸಿಂಗ್ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ರಾಹುಲ್ ಗಾಂಧಿ ಹಾಗೂ ಪಕ್ಷದ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಭೇಟಿ ಸಮಯ ಕೋರಿದ್ದು, ಅವಕಾಶ ಇನ್ನೂ ಸಿಕ್ಕಿಲ್ಲ.
ರಾಹುಲ್ ಜಿಂಬಾಬ್ವೆ ಪ್ರವಾಸ ಕೈಗೊಳ್ಳುತ್ತಿದ್ದು, ಅದಕ್ಕೂ ಮುನ್ನವೇ ಭೇಟಿ ಮಾಡಲು ಶಿವಕುಮಾರ್ ದೆಹಲಿಯಲ್ಲಿ ಪ್ರಯತ್ನ ಮುಂದುವರೆಸಿದ್ದಾರೆ.
ಈ ಮಧ್ಯೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಮಾಡದೆ ಗಾಳಿ ಕುಡಿಯಲು ಇಲ್ಲಿಗೆ ಬಂದಿಲ್ಲ ಎಂದು ತಿರುಗೇಟು ನೀಡಿದ್ದಾರೆ.


