ನವದೆಹಲಿ:ಅಧಿಕಾರ ಹಂಚಿಕೆ ಕುರಿತು ಮೇ 10ರೊಳಗೆ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ವರಿಷ್ಠರಿಗೆ ಗಡುವು ನೀಡಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿನ ನಾಯಕತ್ವ ಗೊಂದಲ ಪರಿಹರಿಸುವಂತೆ ವರಿಷ್ಠರಿಗೆ ಮನವಿ ಮಾಡುವ ಉದ್ದೇಶದಿಂದ ಕಳೆದ ಮೂರು ದಿನಗಳಿಂದ ಶಿವಕುಮಾರ್ ದೆಹಲಿಯಲ್ಲಿ ಬಿಡಾರ ಹೂಡಿದ್ದಾರೆ.
ಖರ್ಗೆ ಜೊತೆ ಸುದೀರ್ಘ ಚರ್ಚೆ
ಶುಕ್ರವಾರ ರಾತ್ರಿ ತಮ್ಮ ಸಹೋದರ, ಮಾಜಿ ಸಂಸದ ಡಿ.ಕೆ.ಸುರೇಶ್ ಜೊತೆಗೂಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ಸುದೀರ್ಘ ಚರ್ಚೆ ಮಾಡಿದ್ದಾರೆ.
ಪಕ್ಷ ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತು ನನಗೆ ತಲಾ ಎರಡೂವರೆ ವರ್ಷ ಮುಖ್ಯಮಂತ್ರಿ ಹುದ್ದೆ ನೀಡುವ ವಾಗ್ದಾನ ಮಾಡಿದ್ದಿರಿ.
ಬರುವ ಮೇ 20ಕ್ಕೆ ಸಿದ್ದರಾಮಯ್ಯ ಆಡಳಿತಕ್ಕೆ ಮೂರು ವರ್ಷ ಪೂರ್ಣಗೊಳ್ಳಲಿದೆ, ಆದರೆ, ಇನ್ನೂ ನನ್ನ ಪಕ್ಷ ನಿಷ್ಠೆಯನ್ನು ಪರೀಕ್ಷೆ ಮಾಡುತ್ತಲೇ ಇದ್ದೀರಿ.
ಎಐಸಿಸಿ ನಿಲುವು ಪ್ರಕಟಿಸಬೇಕು
ಇನ್ನೂ ಮಾಡುವುದಾದರೆ ಮಾಡಿ, ನಮ್ಮಿಂದ ಪಕ್ಷ ವಿರೋಧಿ ಕೆಲಸ ಮಾಡಲ್ಲ, ಆದರೆ, ಮೇ 10ರೊಳಗೆ ಎಐಸಿಸಿ ತನ್ನ ನಿಲುವು ಪ್ರಕಟಿಸಬೇಕು.
ಒಂದು ವೇಳೆ ಈ ದಿನದೊಳಗೆ ತೀರ್ಮಾನ ಬರದಿದ್ದರೆ, ಶಾಸಕರಲ್ಲಿ ಅಸಮಾಧಾನ ಸ್ಫೋಟಗೊಂಡು ಗೊಂದಲ ಉಂಟಾದರೆ ಅದಕ್ಕೆ ನಾನು ಹೊಣೆಯಲ್ಲ ಎಂದಿದ್ದಾರೆ.
ನಾನಂತೂ ಪಕ್ಷದ ವಿರುದ್ಧ ಹೋಗುವುದಿಲ್ಲ, ಆದರೆ, ನಮ್ಮ ಶಾಸಕರ ನಡೆಯ ಬಗ್ಗೆ ನಾನು ಯಾವುದೇ ಭರವಸೆ ನೀಡುವುದಿಲ್ಲ.
ಅಧಿಕಾರ ಹಸ್ತಾಂತರ ನಿರೀಕ್ಷೆ
ನವೆಂಬರ್ 2025ರ ನಂತರ ನನಗೆ ಅಧಿಕಾರ ಹಸ್ತಾಂತರ ಆಗುವ ನಿರೀಕ್ಷೆಯಲ್ಲಿದ್ದೆ, ಆಗಲೇ ಕೆಲವು ಶಾಸಕರು ಹುರುಪಿನಿಂದ ಬಹಿರಂಗ ಹೇಳಿಕೆಗಳನ್ನು ನೀಡಿದ್ದನ್ನು ನೀವು ಗಮನಿಸಿದ್ದೀರಿ.
ಸಿದ್ದರಾಮಯ್ಯ ಸಹಾ ನುಡಿದಂತೆ ನಡೆದುಕೊಳ್ಳುತ್ತಿಲ್ಲ, ಅಧಿಕಾರ ಹಂಚಿಕೆ ವಿಷಯ ಮುನ್ನೆಲೆಗೆ ಬಂದಾಗಲೆಲ್ಲಾ ಗಮನ ಬೇರೆಡೆ ಸೆಳೆಯಲು ವಿಷಯಾಂತರ ಮಾಡುತ್ತಿದ್ದಾರೆ.
ಚಳಿಗಾಲದ ಅಧಿವೇಶನ, ಬಜೆಟ್ ಅಧಿವೇಶನ, ಕೆಲವು ರಾಜ್ಯಗಳ ಹಾಗೂ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ, ಹೀಗೆ ಒಂದಲ್ಲಾ ಒಂದು ನೆಪ ಹೂಡುವ ಮೂಲಕ ನನಗೆ ದಕ್ಕಬೇಕಾದ ಅಧಿಕಾರ ಸಿಗದಂತೆ ಮಾಡಲಾಗುತ್ತಿದೆ.
ದೆಹಲಿ ಕಡೆ ಬರುವುದಿಲ್ಲ
ಈಗ ಎಲ್ಲಾ ಅಸ್ತ್ರಗಳು ಪ್ರಯೋಗವಾಗಿವೆ, ಇನ್ನು ಮೇಲಾದರೂ ನನ್ನ ವಿಷಯ ತೆಗೆದುಕೊಳ್ಳಿ, ಮೇ 10ರ ನಂತರ ನಾನು ಈ ವಿಷಯವಾಗಿ ದೆಹಲಿ ಕಡೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಡಿ.ಕೆ. ಸಹೋದರರ ಮಾತುಗಳನ್ನು ಆಲಿಸಿದ ಖರ್ಗೆ, ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಏಪ್ರಿಲ್ 29ಕ್ಕೆ ಹಿಂತಿರುಗಲಿದ್ದು, ಬಂದ ತಕ್ಷಣ ಕರ್ನಾಟಕ ಕಾಂಗ್ರೆಸ್ ವಿಚಾರ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.


