ಬೆಂಗಳೂರು:ಬಾಕಿ ಬಿಲ್ ಪಾವತಿಸಿ, ಕಮೀಷನ್‌ಗೆ ಕಡಿವಾಣ ಹಾಕಿ ಇಲ್ಲದಿದ್ದರೆ, ರಾಜ್ಯಪಾಲರು ಮತ್ತು ಎಐಸಿಸಿ ಅಧ್ಯಕ್ಷರಿಗೆ ದೂರು ನೀಡಬೇಕಾಗುತ್ತದೆ ಎಂದು ಕರ್ನಾಟಕ ಗುತ್ತಿಗೆದಾರರ ಸಂಘ ಇಂದಿಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದೆ.
ತಮ್ಮ ಬೇಡಿಕೆಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಇಂದು ಮಧ್ಯಾನ್ಹ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ, ಬಾಕಿ ಪಾವತಿಗೆ ಸಂಬಂಧಿಸಿದಂತೆ ಮೂರು ಬೇಡಿಕೆಗಳನ್ನು ಇಟ್ಟಿದ್ದಾರೆ.
ಕಮೀಷನ್ ದಂಧೆ ಹೆಚ್ಚಾಗಿದೆ
ಮುಖ್ಯಮಂತ್ರಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಮಂಜುನಾಥ್, ಕಳೆದ ಸರ್ಕಾರಕ್ಕಿಂತ ಕಾಂಗ್ರೆಸ್ ಸರ್ಕಾರದಲ್ಲಿ ಕಮೀಷನ್ ದಂಧೆ ಹೆಚ್ಚಾಗಿದೆ ಎಂದು ಆರೋಪಿಸಿದರು.
ಗುತ್ತಿದಾರರು ಮಾಡಿರುವ ಕೆಲಸದ ಬಾಕಿ 30,000 ಕೋಟಿ ರೂ. ಪಡೆಯಲು ಎಷ್ಟೇ ಅಲೆದಾಟ ಮಾಡಿದರೂ ಸಿಗುತ್ತಿಲ್ಲ, ಆದ್ದರಿಂದ, ಏಪ್ರಿಲ್ ಅಂತ್ಯದೊಳಗೆ ಕನಿಷ್ಠ 15,000 ಕೋಟಿ ರೂ. ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದೇವೆ.
ಅಧಿಕಾರಿಗಳ ಮಟ್ಟದಲ್ಲಿ ಪರ್ಸೆಂಟೇಜ್ ಕಳೆದ ಸರ್ಕಾರಕ್ಕಿಂತ ಈ ಸರ್ಕಾರದಲ್ಲೇ ಹೆಚ್ಚಾಗಿದೆ, ಅದಕ್ಕೆ ಕಡಿವಾಣ ಹಾಕಿ, ಇಲ್ಲವಾದರೆ, ನಾವು ರಾಜ್ಯಪಾಲರಿಗೆ ದೂರು ನೀಡಬೇಕಾಗುತ್ತದೆ ಎಂದೂ ಹೇಳಿದ್ದೇವೆ.
ಅಧಿಕಾರಿಗಳ ಮಟ್ಟದಲ್ಲಿ ದಂಧೆ
ಕಳೆದ ಸರ್ಕಾರದಲ್ಲಿ ಶೇಕಡ 40ರಷ್ಟು ಕಮೀಷನ್ ಆರೋಪ ಮಾಡಿದ್ದಿರಿ, ಅಂದರೆ, ಈ ಸರ್ಕಾರದಲ್ಲಿ ಅದಕ್ಕಿಂತ ಹೆಚ್ಚು ಎನ್ನುತ್ತೀರಿ, ಅದು ಎಷ್ಟು ಎಂಬ ಸುದ್ದಿಗಾರರ ಪ್ರಶ್ನೆಗೆ, ನಾನು, ಅಷ್ಟು, ಇಷ್ಟು ಎಂದು ಹೇಳುವುದಿಲ್ಲ, ಅಧಿಕಾರಿಗಳ ಮಟ್ಟದಲ್ಲಿ ಈ ದಂಧೆ ಹೆಚ್ಚಿದೆ, ಅದನ್ನು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇವೆ.
ಈಗಾಗಲೇ ಸಂಬಂಧಪಟ್ಟ ಸಚಿವರುಗಳ ಗಮನಕ್ಕೆ ತಂದರೂ, ನಮ್ಮ ಕಷ್ಟ ಪರಿಹಾರ ಆಗಿಲ್ಲ, ಕಮೀಷನ್ ದಂಧೆಗೆ ಕಡಿವಾಣ ಬಿದ್ದಿಲ್ಲ, ಅದಕ್ಕಾಗಿಯೇ ನಿಮ್ಮ ಬಳಿ ಬಂದಿದ್ದೇವೆ ಎಂಬುದನ್ನು ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿದ್ದೇವೆ.
ನಮ್ಮ ಗಡುವಿನೊಳಗೆ ಪರಿಹಾರ ಸಿಗದಿದ್ದರೆ, ರಾಜ್ಯಪಾಲರಿಗೆ ದೂರು ನೀಡುವುದರ ಜೊತೆಗೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ದೂರು ನೀಡುತ್ತೇವೆ ಎಂದರು.
ಯಾವ ಇಲಾಖೆ ಎಷ್ಟು ಬಾಕಿ
ಸಂಘದ ಸದಸ್ಯರುಗಳಿಗೆ ಯಾವ ಯಾವ ಇಲಾಖೆಗಳಲ್ಲಿ ಎಷ್ಟು ಬಾಕಿ ಉಳಿದುಕೊಂಡಿದೆ ಎಂಬ ಮಾಹಿತಿಯನ್ನೂ ನೀಡಿದ್ದೇವೆ.
ಸರ್ಕಾರದ ಕಾಮಗಾರಿ ನಡೆಸಲು ಗುತ್ತಿಗೆದಾರರು ಸಾಲ ಪಡೆದು, ಅದರ ಬಡ್ಡಿ ಕಟ್ಟಲಾಗದೆ, ಎಷ್ಟು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ, ಇಂತಹದ್ದಕ್ಕೆ ಕಡಿವಾಣ ಹಾಕಿ ಎಂದು ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದೇವೆ ಎಂದರು.
ಗುತ್ತಿಗೆದಾರರ ಅಧ್ಯಕ್ಷರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಅವರು ಹೇಳಿದಂತೆ ಹಣ ಬಿಡುಗಡೆ ಸಾಧ್ಯವಿಲ್ಲ.
ಪರಿಸ್ಥಿತಿ ನೋಡಿ ಹಣ ಬಿಡುಗಡೆ
ರಾಜ್ಯದ ಅರ್ಥಿಕ ಪರಿಸ್ಥಿತಿ ನೋಡಿಕೊಂಡು ಒಂದಷ್ಟು ಹಣ ಬಿಡುಗಡೆ ಮಾಡಲಾಗುವುದು, ಬಜೆಟ್ ಮಂಡನೆ ನಂತರ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದ್ದೇನೆ, ಅವರು ನೀಡಿರುವ ಗಡುವಿನಲ್ಲಿ 15,00೦ ಕೋಟಿ ರೂ. ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಮಂಗಡಪತ್ರದಲ್ಲಿ ಅನುಮತಿ ಪಡೆಯದೆ ಮೌಖಿಕ ಆದೇಶದ ಮೇಲೆ ಕೆಲಸ ಮಾಡಿ, ಬಾಕಿ ನೀಡಿ ಎಂದು ಬಂದರೆ, ಎಲ್ಲಿಂದ ತರುವುದು ಎಂದು ಖಾರವಾಗಿ ಪ್ರಶ್ನಿಸಿದರು.
ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಈ ರೀತಿಯೇ ನಡೆದಿದೆ, ಈಗ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ.
ಯಾರಿಗಾದರೂ ದೂರು ಕೊಡಲಿ
ಹಣಕಾಸು ಪರಿಸ್ಥಿತಿ ನೋಡಿ ಒಂದಷ್ಟು ಬಾಕಿ ಕೊಡುತ್ತೇನೆ, ಅವರು ಯಾರಿಗೆ ಬೇಕಾದರೂ ದೂರು ಕೊಡಲಿ.
ಬಾಕಿ ಬಿಲ್ ಪಾವತಿಗೆ ಹಣ ಕೇಳುತ್ತಿದ್ದಾರೆ ಎಂದರೆ, ಕೊಡಬೇಡಿ, ಹಣ ಕೇಳುವುದೂ, ಕೊಡುವುದೂ ಎರಡೂ ಭ್ರಷ್ಟಾಚಾರದ ವ್ಯಾಪ್ತಿಗೆ ಬರುತ್ತದೆ, ನಿಮಗೆ ಯಾರು ಹಣ ಕೇಳುತ್ತಿದ್ದಾರೆ ಅವರ ಮೇಲೆ ದೂರು ನೀಡಿ, ನಾನಂತೂ ಹಣ ಕೊಡಿ ಎಂಬುದಾಗಿ ಯಾರನ್ನೂ ಎಲ್ಲಿಯೂ ಕೇಳಿಲ್ಲ ಎಂದರು.


