ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಪರಿಸ್ಥಿತಿ ನರಕಯಾತನೆಯಾಗಿದ್ದು, ನನಗೆ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಅಂಗಲಾಚಿಕೊಂಡಿದ್ದಾರೆ.
ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾಗಿ ಜೈಲುವಾಸ ಅನುಭವಿಸುತ್ತಿರುವ ದರ್ಶನ್ ಹಾಗೂ ಇತರ ಆರೋಪಿಗಳನ್ನು ರಾಜ್ಯದ ಇತರೆ ಕಾರಾಗೃಹಗಳಿಗೆ ವರ್ಗಾವಣೆ ಮಾಡುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿ, ಹೆಚ್ಚುವರಿ ಹಾಸಿಗೆ ಹಾಗೂ ತಲೆದಿಂಬು ನೀಡುವಂತೆ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ಬೆಂಗಳೂರಿನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಿತು.
ಫಂಗಸ್‌ನಿಂದ ಬಟ್ಟೆಗಳು ವಾಸನೆ
ಕಾರಾಗೃಹದಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದ ದರ್ಶನ್ ತನಗೆ ಜೈಲಿನಲ್ಲಿ ಬದುಕಲು ಆಗುತ್ತಿಲ್ಲ, ಬಿಸಿಲು ನೋಡದೆ ಹಲವಾರು ದಿನಗಳು ಕಳೆದಿವೆ, ಫಂಗಸ್‌ನಿಂದಾಗಿ ಬಟ್ಟೆಗಳು ವಾಸನೆ ಬರುತ್ತಿದೆ, ನನಗೆ ಬದುಕು ಸಾಕಾಗಿದೆ ದಯವಿಟ್ಟು ವಿಷ ಕೊಡಲು ಆದೇಶ ಹೊರಡಿಸಿ ಎಂದು ಗೋಗರೆದಿದ್ದಾರೆ.
ಈ ಮನವಿಗೆ ನ್ಯಾಯಾಧೀಶರು, ನೀವು ಹಾಗೆಲ್ಲ ಕೇಳಬಾರದು, ನಾವು ಆ ರೀತಿಯಲ್ಲಿ ಆದೇಶ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ವಿಚಾರಣೆ ವೇಳೆ ವಿಷ ಕೊಡಿ ಎಂಬುದಾಗಿ ದರ್ಶನ್ ಮೂರು ಬಾರಿ ಬೇಡಿಕೊಂಡಿದ್ದು, ಫಂಗಸ್ ಆಗಿದೆ ಎಂದು ಹಲವು ಬಾರಿ ಅಳಲು ತೋಡಿಕೊಂಡಿದ್ದಾರೆ.
ದರ್ಶನ್ ಅರ್ಜಿ ಮಾನ್ಯ
ನಟ ದರ್ಶನ್ ಮತ್ತು ಇತರ ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬೇರೆಡೆಗೆ ಸ್ಥಳಾಂತರಿಸಬೇಕೆಂದು ಕೋರಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ, ಕನಿಷ್ಠ ಮೂಲಸೌಕರ್ಯ ನೀಡಬೇಕೆಂದು ದರ್ಶನ್ ಕೋರಿದ ಅರ್ಜಿಯನ್ನು ಮಾನ್ಯ ಮಾಡಿ, ಜೈಲು ನಿಯಮಾವಳಿ ಪ್ರಕಾರ ಏನೆಲ್ಲಾ ಸೌಲಭ್ಯ ಕೊಡಬೇಕು ಅದನ್ನು ನೀಡಿ, ಕಾರಾಗೃಹದೊಳಗೆ ಓಡಾಡಲು ಅವಕಾಶ ಮಾಡಿ ಹಾಗೂ ಹಾಸಿಗೆ, ದಿಂಬು ನೀಡುವಂತೆಯೂ ಸೂಚಿಸಿದೆ.


