ಬೆಂಗಳೂರು:ಅಧಿಕಾರ ಹಸ್ತಾಂತರ ಕುರಿತು ಪಕ್ಷ ಮತ್ತು ಸರ್ಕಾರಕ್ಕೆ ದಕ್ಕೆ ಆಗದಂತೆ ಎರಡು-ಮೂರು ದಿನದಲ್ಲಿ ನಿರ್ಣಯ ಕೈಗೊಳ್ಳುವಂತೆ ದೆಹಲಿ ವರಿಷ್ಠರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂದೇಶ ರವಾನಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತ ಎರಡೂವರೆ ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲಿಗರು ಅಧಿಕಾರ ಹಸ್ತಾಂತರಿಸಬೇಕೆಂಬ ಕೂಗು ಎಬ್ಬಿಸಿದ್ದಾರೆ.
ಮುಖ್ಯಮಂತ್ರಿ ಮೇಲೆ ಒತ್ತಡ
ಇದರ ಜೊತೆಯಲ್ಲೇ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆಯೂ ಮುಖ್ಯಮಂತ್ರಿ ಮೇಲೆ ಒತ್ತಡ ತರಲು ಶಿವಕುಮಾರ್ ಬೆಂಬಲಿಗರು ಮುಂದಾಗಿದ್ದಾರೆ.
ಇನ್ನೊಂದೆಡೆ ಉಪಮುಖ್ಯಮಂತ್ರಿ ಪರ ಸಹಿ ಸಂಗ್ರಹವೂ ನಡೆಯುತ್ತಿದ್ದು, ಒಂದು ಹಂತಕ್ಕೆ ತಲುಪುತ್ತಿದ್ದಂತೆ ಬಹಿರಂಗವಾಗಿಯೇ ಶಾಸಕಾಂಗ ಸಭೆ ಕರೆಯುವಂತೆ ಸಿದ್ದರಾಮಯ್ಯ ಹಾಗೂ ವರಿಷ್ಠರನ್ನು ಒತ್ತಾಯಿಸಲಿದ್ದಾರೆ.
ಮತ್ತೊಂದೆಡೆ ಶಿವಕುಮಾರ್ ಪಕ್ಷದ ಶಾಸಕರನ್ನು ಕರೆದು ಮುಖಾಮುಖಿ ಚರ್ಚಿಸಿ, ತಮ್ಮನ್ನು ಬೆಂಬಲಿಸುವಂತೆ ಮನವೊಲಿಕೆ ಪ್ರಯತ್ನವನ್ನೂ ನಡೆಸಿದ್ದಾರೆ.
ವಿಷಯಕ್ಕೆ ಶೀಘ್ರವೇ ತೆರೆ
ಕರ್ನಾಟಕ ಕಾಂಗ್ರೆಸ್‌ನಲ್ಲಿ ಬುಗಿಲೆದ್ದಿರುವ ಅಧಿಕಾರ ಹಸ್ತಾಂತರ ವಿಷಯಕ್ಕೆ ಶೀಘ್ರವೇ ತೆರೆ ಎಳೆಯದಿದ್ದರೆ, ಇರುವ ಅಧಿಕಾರವೂ ಹೋಗಲಿದೆ ಎಂಬ ಭಯ ಕೆಲವು ಶಾಸಕರಿಗೆ ಕಾಡುತ್ತಿದೆ.
ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರುಗಳು ಶಿವಕುಮಾರ್ ಪರ ನಿಂತಿದ್ದಾರೆ.
ಈ ಮೂವರೂ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕಾರ ಹಸ್ತಾಂತರ ವಿಷಯವನ್ನು ಸುಲಲಿತವಾಗಿ ಬಗೆಹರಿಸುವ ಜವಾಬ್ದಾರಿ ನೀಡಿದ್ದಾರೆ.
ಅಧಿಕಾರ ಕೊಡಬೇಕಿದೆ
ಶಿವಕುಮಾರ್ ಪಕ್ಷದ ನಿಷ್ಠಾವಂತ ನಾಯಕ ಅವರಿಗೆ ಸಿಗಬೇಕಾದ ಅಧಿಕಾರ ಕೊಡಬೇಕಿದೆ ಎಂಬ ವಿಚಾರವನ್ನು ಖರ್ಗೆ ಗಮನಕ್ಕೆ ತಂದಿದ್ದಾರೆ.
ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಕರ್ನಾಟಕ ಕಾಂಗ್ರೆಸ್ ಮತ್ತು ಸರ್ಕಾರದ ಬಗ್ಗೆ ಇದುವರೆಗೆ ಯಾವುದೇ ದೃಢ ನಿಲುವು ತಳೆದಿಲ್ಲ.
ಅಧಿಕಾರ ಹಸ್ತಾಂತರ ಕುರಿತಂತೆ ತಮ್ಮ ನಿಲುವು ಏನೆಂಬುದನ್ನು ರಾಹುಲ್ ಬಹಿರಂಗ ಪಡಿಸದಿರುವುದು ಖರ್ಗೆ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಸೂತ್ರ ಸಿದ್ಧಪಡಿಸಲು ಕಸರತ್ತು
ವಿದೇಶ ಪ್ರವಾಸದಲ್ಲಿರುವ ರಾಹುಲ್ ಬರುವುದಕ್ಕೂ ಮುನ್ನ ಒಂದು ಸೂತ್ರ ಸಿದ್ಧಪಡಿಸಲು ಖರ್ಗೆ ಕಸರತ್ತು ನಡೆಸಿದ್ದಾರೆ.
ಸೋನಿಯಾ, ಪ್ರಿಯಾಂಕಾ ಹಾಗೂ ರಾಜ್ಯ ಉಸ್ತುವಾರಿ ಸುರ್ಜೇವಾಲ ನೀಡಿರುವ ಮಾಹಿತಿಯನ್ನು ಸಿದ್ದರಾಮಯ್ಯ ಅವರಿಗೆ ತಲುಪಿಸಿರುವ ಖರ್ಗೆ ಇನ್ನೆರಡು-ಮೂರು ದಿನದಲ್ಲಿ ಈ ಬಗ್ಗೆ ನಿಮ್ಮ ನಿಲುವನ್ನು ಪಕ್ಷಕ್ಕೆ ತಿಳಿಸಿ ಎಂಬ ಸಂದೇಶ ರವಾನಿಸಿದ್ದಾರೆ.
ಸರ್ಕಾರ ರಚನೆಗೂ ಮುನ್ನ ಆಗಿರುವ ಒಪ್ಪಂದವನ್ನು ಪಾಲಿಸುವಂತೆ ಶಿವಕುಮಾರ್ ವರಿಷ್ಠರನ್ನು ಕೋರಿದ್ದಾರೆ.
ನೀವೇ ನಿರ್ಣಯಕ್ಕೆ ಬನ್ನಿ
ಒಪ್ಪಂದ ನಡೆದಿದೆ, ಈಗ ನೀವೇ ಇದರ ಬಗ್ಗೆ ನಿರ್ಣಯಕ್ಕೆ ಬನ್ನಿ, ನಿಮ್ಮ ನಿರ್ಧಾರದ ನಂತರ ರಾಹುಲ್ ಸ್ವದೇಶಕ್ಕೆ ಹಿಂತಿರುಗಿದ ನಂತರ ಅವರೊಂದಿಗೆ ಚರ್ಚಿಸಿ ಪಕ್ಷದ ತೀರ್ಮಾನವನ್ನು ತಿಳಿಸುತ್ತೇವೆ ಎಂದಿದ್ದಾರೆ ಖರ್ಗೆ.
ಡಿಸೆಂಬರ್ 1ರಿಂದ ಆರಂಭಗೊಳ್ಳುತ್ತಿರುವ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ರಾಹುಲ್ ಸ್ವದೇಶಕ್ಕೆ ಮರಳಲಿದ್ದಾರೆ.
ಅದುವರೆಗೂ ಕರ್ನಾಟಕ ಕಾಂಗ್ರೆಸ್ ನಾಯಕತ್ವ ಕಗ್ಗಂಟು ಹೀಗೇ ಮುಂದುವರೆಯುವ ಸಾಧ್ಯತೆ ಇದೆ.

