ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ನಡುವಿನ ಸಂಬಂಧ ಹಳಸಿದೆ ಎಂಬ ವಿಷಯ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ.
ಇತ್ತೀಚಿನ ಬೆಳವಣಿಗೆಗಳು ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಖಾನ್ ನಡುವೆ ಮೊದಲಿನ ಅನ್ಯೋನ್ಯತೆ ಇಲ್ಲವೆಂಬುದಕ್ಕೆ ಪೂರಕವಾಗಿವೆ.
ಪ್ರವಾಸಕ್ಕೆ ಗೈರು
ಅಧಿಕಾರ ಹಂಚಿಕೆ ವಿಚಾರದಲ್ಲಿ, ಸಿದ್ದರಾಮಯ್ಯ ತಮ್ಮ ನಾಯಕ ಎಂಬುದಾಗಿ ಬಹಿರಂಗವಾಗಿ ಹೇಳುತ್ತಿದ್ದ ಜಮೀರ್ ಇತ್ತೀಚಿಗೆ ಮುಖ್ಯಮಂತ್ರಿಗಳ ಪ್ರವಾಸದಲ್ಲಿ ಗೈರು ಹಾಜರಿ ಎಂದು ಕಾಣುತ್ತಿದೆ.
ಇದೀಗ ಜಮೀರ್ ಅಹ್ಮದ್ ಖಾನ್ ಹೆಚ್ಚಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಕಾಣಿಸಿಕೊಳ್ಳತೊಡಗಿದ್ದಾರೆ.
ಶಿವಕುಮಾರ್ ಅನುಪಸ್ಥಿತಿಯಲ್ಲಿ ಜಮೀರ್, ಕುಣಿಗಲ್ ಕ್ಷೇತ್ರದ ಶಾಸಕ ಡಾ.ರಂಗನಾಥ್ ನಿವಾಸದಲ್ಲಿ ನಡೆದ ರಂಜಾನ್ ಇಫ್ತಿಹಾರ್ ಕೂಟದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು.
ಶಿವಕುಮಾರ್ ಜೊತೆ ಪ್ರಾರ್ಥನೆ
ಅಲ್ಪಸಂಖ್ಯಾತ ಸಮುದಾಯದ ನಾಯಕರ ಜೊತೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಪಕ್ಷ ಮತ್ತು ಸರ್ಕಾರದ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸುತ್ತಿರುವುದು ಗಮನ ಸೆಳೆಯುತ್ತಿದೆ.
ರಂಜಾನ್ ಆಚರಣೆ ವೇಳೆ ಸಿದ್ದರಾಮಯ್ಯ ಜೊತೆ ನಗರದ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದರು, ಆದರೆ, ಈ ಬಾರಿ ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಸ್ಜೀದ್-ಇ-ಖಾದ್ರಿಯಾದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ರಿಜ್ವಾನ್ ಜೊತೆ ಸಿದ್ದರಾಮಯ್ಯ
ಜಮೀರ್ ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿರುವ ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಜೊತೆ ಸಿದ್ದರಾಮಯ್ಯ ಸಾಮೂಹಿಕ ಪ್ರಾರ್ಥನೆ ಮಾಡಿದರು.
ಶಿವಕುಮಾರ್ ಜೊತೆ ಪವಿತ್ರ ರಂಜಾನ್ ಉಪವಾಸ ಅಂತ್ಯಗೊಳಿಸುವ ಮೂಲಕ ಗಮನ ಸೆಳೆದ ಜಮೀರ್ ನಂತರ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ತಮ್ಮ ಪುತ್ರನೊಂದಿಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.


