ಬೆಂಗಳೂರು:ಪಕ್ಷ ಮತ್ತು ಸರ್ಕಾರಕ್ಕೆ ಹೊಸ ಉತ್ಸಾಹ, ವರ್ಚಸ್ಸು ತಂದುಕೊಡುವಂತಹ ನಾಯಕತ್ವಕ್ಕೆ ಅವಕಾಶ ನೀಡುವಂತೆ ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯರು ಎಐಸಿಸಿ ವರಿಷ್ಠರನ್ನು ಆಗ್ರಹಿಸಿದ್ದಾರೆ.
ಮಂಗಳವಾರ ರಾತ್ರಿ ನಗರದ ಪಂಚತಾರಾ ಹೋಟೆಲ್‌ನಲ್ಲಿ ಸೇರಿದ್ದ ಈ ಶಾಸಕರು, ಪರೋಕ್ಷವಾಗಿ ಪಕ್ಷ ಮತ್ತು ಸರ್ಕಾರದ ಹಿತದೃಷ್ಟಿಯಿಂದ ನಾಯಕತ್ವ ಬದಲಾವಣೆಗೆ ಆಗ್ರಹಿಸಿದ್ದಾರೆ.
ತಕ್ಷಣ ಮಧ್ಯಪ್ರವೇಶಿಸಿ
ಅಧಿಕಾರ ಹಸ್ತಾಂತರ ವಿದ್ಯಮಾನದಿಂದ ಪಕ್ಷ ಸಂಘಟನೆ ಮತ್ತು ಸರ್ಕಾರದ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರುತ್ತವೆ, ಹೀಗಾಗಿ ತಕ್ಷಣವೇ ಮಧ್ಯಪ್ರವೇಶಿಸಿ, ಇದಕ್ಕೆ ಮಂಗಳ ಹಾಡಬೇಕು ಎಂದು ಪರಿಷತ್‌ನ 20 ಸದಸ್ಯರು ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.
ಕಳೆದ ಒಂದು ವರ್ಷದಿಂದ ನಾಯಕತ್ವ ಬದಲಾವಣೆ ವಿಚಾರ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ, ಇದರಿಂದ ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿದ್ದಾರೆ, ಪಕ್ಷ ಸಂಘಟನೆ ಮೇಲೆ ಪರಿಣಾಮ ಉಂಟಾಗಿದೆ, ಹೀಗೆ ಮುಂದುವರೆದರೆ ಸದ್ಯದಲ್ಲಿಯೇ ನಡೆಯಲಿರುವ ಜಿಲ್ಲಾ, ತಾಲೂಕು ಪಂಚಾಯತ್ ಸೇರಿದಂತೆ ಸ್ಥಳೀಯಸಂಸ್ಥೆ ಚುನಾವಣೆಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಇವರು ಅಭಿಪ್ರಾಯಪಟ್ಟಿದ್ದಾರೆ.
ತಕ್ಷಣವೇ ರಾಜ್ಯದಲ್ಲಿ ಉಂಟಾಗಿರುವ ನಾಯಕತ್ವ ಬಿಕ್ಕಟ್ಟು ಪರಿಹರಿಸಬೇಕು, ಮುಂಬರುವ ಸ್ಥಳೀಯಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ವಿಧಾನಸಭೆ ಚುನಾವಣೆಗೆ ಸಜ್ಜುಗೊಳ್ಳಬೇಕಿದೆ.
ತುರ್ತಾಗಿ ತೀರ್ಮಾನ ಕೈಗೊಳ್ಳಿ
ಹೀಗಾಗಿ ಪಕ್ಷ ಮತ್ತು ಸರ್ಕಾರಕ್ಕೆ ಹೊಸ ಉತ್ಸಾಹ ಮತ್ತು ವರ್ಚಸ್ಸು ತಂದುಕೊಡುವಲ್ಲಿ ಹೈಕಮಾಂಡ್ ತುರ್ತಾಗಿ ತೀರ್ಮಾನ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯ ಕಾಂಗ್ರೆಸ್ಸಿನಲ್ಲಿ ಉಂಟಾಗಿರುವ ಎಲ್ಲಾ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿಗೆ ತಮಗೆ ಪ್ರತ್ಯೇಕವಾಗಿ ಅವಕಾಶ ಕಲ್ಪಿಸಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಪತ್ರದ ಪ್ರತಿ ರವಾನೆ
ಸಿದ್ಧಪಡಿಸಿದ ಮನವಿ ಪತ್ರವನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ನೀಡಿರುವ ಸದಸ್ಯರು, ಪತ್ರದ ಪ್ರತಿಗಳನ್ನು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಸಿ.ವೇಣುಗೋಪಾಲ್ ಅವರಿಗೆ ರವಾನಿಸಿದ್ದಾರೆ.
ಭೋಜನಕೂಟದಲ್ಲಿ ಪರಿಷತ್ ಸದಸ್ಯರಾದ ಸಲೀಂ ಅಹಮದ್, ಬಸವನಗೌಡ ಬಾದರ್ಲಿ, ಪುಟ್ಟಣ್ಣ, ಡಿ.ಟಿ.ಶ್ರೀನಿವಾಸ್, ದಿನೇಶ್ ಗೂಳಿಗೌಡ, ಎಸ್.ರವಿ, ಸುಧಾಮ್ ದಾಸ್, ಜಗದೇವ್ ಗುತ್ತೇದಾರ್, ಚಂದ್ರಶೇಖರ್ ಪಾಟೀಲ್, ಮಧು ಮಾದೇಗೌಡ, ವಸಂತ್‌ಕುಮಾರ್, ಚನ್ನರಾಜ ಹಟ್ಟಿಹೊಳಿ, ಸುನಿಲ್‌ಗೌಡ ಪಾಟೀಲ್, ಮಂಜುನಾಥ ಭಂಡಾರಿ ಭಾಗವಹಿಸಿ, ವರಿಷ್ಠರಿಗೆ ಸಲ್ಲಿಸಿರುವ ಮನವಿಗೆ ಸಹಿ ಹಾಕಿದ್ದಾರೆ.


