ನೌಕರರ ಸಮ್ಮುಖದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ
ಬೆಂಗಳೂರು:ವಿದ್ಯುತ್ ಸರಬರಾಜು ವ್ಯವಸ್ಥೆ ಖಾಸಗೀಕರಣ ಇಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಘೋಷಿಸಿದ್ದಾರೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಮತ್ತು ಅಸೋಸಿಯೇಷನ್‌ಗಳ ಒಕ್ಕೂಟ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನೌಕರರ ಮಾತಿಗೆ ಒಪ್ಪಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಸಂಪುಟ ಸಭೆಯಲ್ಲಿ ಚರ್ಚೆ
ಈ ಕುರಿತು ನನ್ನೊಬ್ಬನ ತೀರ್ಮಾನ ಸಾಧ್ಯವಿಲ್ಲ, ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸಹೋದ್ಯೋಗಿಗಳ ಜೊತೆ ಚರ್ಚಿಸಿ, ನಿಮ್ಮಗಳ ಮನವಿಗೆ ಸ್ಪಂದಿಸುತ್ತೇನೆ.
ನಿಮ್ಮ ನಂಬಿಕೆಗೆ ದ್ರೋಹ ಬಗೆಯುವುದಿಲ್ಲ, ನೀವೂ ಸಹಾ ನಮ್ಮನ್ನು 2028ರ ಚುನಾವಣೆಯಲ್ಲಿ ನಮ್ಮನ್ನು ಮತ್ತೆ ಅಧಿಕಾರಕ್ಕೆ ತರುವ ಭರವಸೆ ನೀಡಿ ಎನ್ನುವ ಮೂಲಕ ನೌಕರರ ವಾಗ್ದಾನ ಪಡೆದರು.
ಕಾರ್ಯಕ್ರಮದ ಮಧ್ಯೆಯೇ ನನ್ನ ಸಹೋದ್ಯೋಗಿ ಕೆ.ಜೆ.ಜಾರ್ಜ್ ಹಾಗೂ ಎಲ್ಲಾ ಎಸ್ಕಾಂ ಅಧ್ಯಕ್ಷರುಗಳು ವಿದ್ಯುತ್ ಸರಬರಾಜು ವ್ಯವಸ್ಥೆ ಖಾಸಗೀಕರಣ ಬೇಡ ಎಂದು ಮನವಿ ಮಾಡಿದರು.
ಬಿಜೆಪಿಗೆ ವಿರೋಧಿಸಲಿಲ್ಲ
ಹಿಂದಿನ ಬಿಜೆಪಿ ಸರ್ಕಾರ ಖಾಸಗೀಕರಣ ಮಾಡಲು ಮುಂದಾದಾಗ ನೀವು ಯಾರೂ ವಿರೋಧಿಸಲಿಲ್ಲ, ನಾನು ಅಧಿಕಾರಕ್ಕೆ ಬರುತ್ತಿದ್ದಂತೆ ವಿರೋಧ ವ್ಯಕ್ತಪಡಿಸುತ್ತಿದ್ದೀರಿ.
ಅಂದು ಇಲ್ಲದ್ದು, ಇಂದೇಕೆ ಎಂಬುದಾಗಿ ಪ್ರಶ್ನಿಸಿದ ಶಿವಕುಮಾರ್, ನಿಮ್ಮ ಧ್ವನಿಗೆ ನನ್ನ ಧ್ವನಿ ಕೂಡಿಸಲು ನಾನು ಬದ್ಧ, ಆದರೆ, ಮುಂದೆ, ನನ್ನ ಕೈಹಿಡಿಯಬೇಕು.
ನೀವು ವಿದ್ಯುತ್ ಮಾರ್ಗ ಎಳೆದಿರಿ, ಇದೀಗ ಖಾಸಗಿಯವರು ಅದರ ಮೇಲೆ ದರ್ಬಾರ್ ಮಾಡಲು ಬರುತ್ತಿದ್ದಾರೆ, ಅದಕ್ಕೆ ಅವಕಾಶ ನೀಡುವುದಿಲ್ಲ.
ಅಭಿವೃದ್ಧಿ ಕಾರ್ಯಗಳಾಗಲಿಲ್ಲ
ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ, ಹಣಕ್ಕಾಗಿ ಜನವಿರೋಧಿ ನೀತಿಗಳನ್ನು ಕೈಗೊಂಡಿದ್ದಾರೆ, ಅವರು ಅಧಿಕಾರದಲ್ಲಿ ಇದ್ದಾಗ, ಇಂಧನ ಇಲಾಖೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಲಿಲ್ಲ.
ಇಂಧನ ಇಲಾಖೆ ಸಚಿವನಾಗಿ ನಾನು ಕಾರ್ಯನಿರ್ವಹಿಸುವ ವೇಳೆ, ನೂರಾರು ಲೈನ್‌ಮ್ಯಾನ್ ಹಾಗೂ 4 ರಿಂದ 5 ಸಾವಿರ ಇಂಜಿನಿಯರ್‌ಗಳ ನೇರ ನೇಮಕಾತಿ ಮಾಡಿದೆ, ಅದಾದರೂ ನಿಮ್ಮ ಗಮನದಲ್ಲಿದೆಯೇ ಎಂದು ಪ್ರಶ್ನಿಸಿದರು.
ನನ್ನ ಮೇಲೆ ನಂಬಿಕೆ, ವಿಶ್ವಾಸ ಇಟ್ಟಿದ್ದೀರಿ, ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ, ಟಾಟಾ ಸಂಸ್ಥೆಗೆ ವಿದ್ಯುತ್ ಸರಬರಾಜು ವ್ಯವಸ್ಥೆ ಜವಾಬ್ದಾರಿ ನೀಡುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇಂಧನ ಇಲಾಖೆ ಬಲಿಷ್ಠವಾಗಿದೆ
ಇದೇ ಸಂದರ್ಭದಲ್ಲಿ ಮಾತನಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್, ರಾಜ್ಯದ ಜನರಿಗೆ ವಿದ್ಯುತ್ ಪೂರೈಸಲು ಇಂಧನ ಇಲಾಖೆ ಬಲಿಷ್ಠವಾಗಿದ್ದು, ಖಾಸಗೀಕರಣಗೊಳಿಸುವ ಪ್ರಶ್ನೆಯೇ ಇಲ್ಲ ಎಂದರು.
ಟಾಟಾ ಪವರ್ ಕಂಪನಿ ಕರ್ನಾಟಕದಲ್ಲಿ ವಿದ್ಯುತ್ ಸರಬರಾಜು (ವಿತರಣೆ) ಪರವಾನಗಿ ಕೋರಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ಕ್ಕೆ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಇಂಧನ ಇಲಾಖೆ ಬಲಿಷ್ಠವಾಗಿದೆ, ನಮ್ಮ ಸರ್ಕಾರ ನೌಕರರ ಪರವಾಗಿದೆ, ಖಾಸಗೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ದೇಶನ ನೀಡಲಾಗಿದ್ದು, ಅದರಂತೆ ಎಸ್ಕಾಂಗಳು ಕೆಇಆರ್‌ಸಿ ಮುಂದೆ ಆಕ್ಷೇಪಣೆ ಸಲ್ಲಿಸಿವೆ.
ನಾವು ಯಾವುದೇ ಖಾಸಗಿ ಕಂಪನಿಗೆ ಕಡಿಮೆ ಇಲ್ಲ, ನೌಕರರು ಮತ್ತು ಅಧಿಕಾರಿಗಳ ಬೇಡಿಕೆಗಳಿಗೆ ಸ್ಪಂದಿಸಲಿದ್ದೇವೆ, ಮುಂದಿನ ದಿನಗಳಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಜರುಗಿಸಲಾಗುವುದು.
ವಿದ್ಯುತ್ ಭ್ರದತೆ ಯೋಜನೆ ಸಿದ್ಧ
ನಾವು ರಾಜ್ಯದ ಸೇವೆ ಮಾಡಲು ಬಂದವರು, ಇಲ್ಲಿ ಖಾಸಗೀಕರಣ ವಿಚಾರ ಬರುವುದಿಲ್ಲ, ಇಂಧನ ಇಲಾಖೆ ಈಗಾಗಲೇ ದೂರದೃಷ್ಟಿ ಯೋಜನೆಗಳನ್ನು ಸಿದ್ಧಪಡಿಸಿದೆ, ಮುಂದಿನ 25 ವರ್ಷಗಳಿಗೆ ವಿದ್ಯುತ್ ಭ್ರದತೆ ಒದಗಿಸಲು ಯೋಜನೆ ಸಿದ್ಧವಾಗಿದೆ.
ರೈತರ ಜೊತೆ 10,000 ಎಕರೆಯಲ್ಲಿ ಸೌರ ಪಾರ್ಕ್ ಮಾಡಿದ್ದೇವೆ, ರೈತರು ಇನ್ನೂ 10,000 ಎಕರೆ ಕೊಡಲು ಮುಂದೆ ಬಂದಿದ್ದಾರೆ, ವಿದ್ಯುತ್ ಉತ್ಪಾದನೆ ಅತ್ಯುತ್ತಮವಾಗಿದೆ.
ಪೀಕ್ ಅವರ್ ವಿದ್ಯುತ್ ಮಾರಾಟ ಹೆಚ್ಚಿಸಿರುವುದರಿಂದ ಇಲಾಖೆಗೆ ಲಾಭವಾಗಿದೆ, ವಿನಿಮಯ ಆಧಾರದ ಮೇಲೆ ವಿದ್ಯುತ್ ಪಡೆಯುವುದು ಮತ್ತು ದೀರ್ಘಾವಧಿ ಒಪ್ಪಂದಗಳು ಹಾಗೂ ವಿದ್ಯುತ್ ಖರೀದಿ ಮೂಲಕ ಇಂಧನ ಭದ್ರತೆಗೆ ಕ್ರಮ ವಹಿಸಲಾಗಿದೆ.
ಗೃಹಜ್ಯೋತಿ ಮೂಲಕ 1.67 ಕೋಟಿ ಗ್ರಾಹಕರಿಗೆ ಉಚಿತ ವಿದ್ಯುತ್ ಕೊಟ್ಟಿದ್ದೇವೆ, ಇದಕ್ಕೆ ಬಜೆಟ್‌ನಲ್ಲೇ ಅನುದಾನ ನೀಡಲಾಗಿದೆ, ರೈತರ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಸಲು 21,000 ಕೋಟಿ ರೂ. ಅನುದಾನ ಕೊಡುತ್ತಿದ್ದೇವೆ.
ನಮ್ಮ ಅಧಿಕಾರಿಗಳು, ಇಂಜಿನಿಯರ್ ಮತ್ತು ನೌಕರರು ತಂಡವಾಗಿ ಕೆಲಸ ಮಾಡುತ್ತಿದ್ದಾರೆ, ಯಾವುದೇ ಸಮಸ್ಯೆ ಎದುರಾದರೆ ಶೀಘ್ರವೇ ಪರಿಹಾರ ನೀಡಲಿದ್ದಾರೆ.
ಇಂಧನ ಇಲಾಖೆಯ ಮೂಲಸೌಕರ್ಯ ಹೆಚ್ಚಿಸುವ ಕಾರ್ಯ ವೇಗವಾಗಿ ನಡೆಯುತ್ತಿದೆ, 120 ವಿದ್ಯುತ್ ಉಪಕೇಂದ್ರ ಸ್ಥಾಪಿಸಿದ್ದೇವೆ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯೋಜನೆಗಳು ಜಾರಿಯಾಗಲಿವೆ, ಆ ಮೂಲಕ ವಿದ್ಯುತ್ ಪೂರೈಕೆ ಸಮರ್ಪಕಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದರು.


