ಬೆಂಗಳೂರು:ಮಹರ್ಷಿ ವಾಲ್ಮೀಕಿ ನಿಗಮದ ಹಣ ಲೂಟಿ ಆರೋಪ ಹೊತ್ತಿರುವ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ, ಸರ್ಕಾರದ ವೈಫಲ್ಯ ಜನರಿಗೆ ತಿಳಿಸಲು ಬಿಜೆಪಿ ಸೆಪ್ಟೆಂಬರ್ 1ರಿಂದ 10 ದಿನ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ.
ರಾಯಚೂರಿನಿಂದ ಆರಂಭಗೊಳ್ಳುವ ಪಾದಯಾತ್ರೆ 200 ಕಿಲೋ ಮೀಟರ್ ಕ್ರಮಿಸಿ ಬಳ್ಳಾರಿ ತಲುಪಿ, ಸಮಾರೋಪಗೊಳ್ಳಲಿದೆ.
ಜೆಡಿಎಸ್ ಬೆಂಬಲ
ನಾಗೇಂದ್ರ ತವರು ಜಿಲ್ಲೆಯಲ್ಲೇ ಈ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಪಾದಯಾತ್ರೆ ಮತ್ತು ಸಮಾವೇಶಕ್ಕೆ ಮಿತ್ರ ಪಕ್ಷ ಜೆಡಿಎಸ್ ಬೆಂಬಲ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್, ರಾಯಚೂರು ಪಾದಯಾತ್ರೆಗೆ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ ಎಂದರು.
ರಾಜ್ಯದ ಅಭಿವೃದ್ಧಿ ನಿರ್ಲಕ್ಷ್ಯ, ರೈತರ ಸಂಕಷ್ಟ, ಬಡವರಿಗೆ ಯೋಜನೆ ನೀಡಿಲ್ಲ, ಉದ್ಯೋಗಾವಕಾಶ ಸೃಷ್ಟಿಯಲ್ಲಿ ವೈಫಲ್ಯ, ಮೀಸಲಾತಿ ಜಾರಿ, ಹೊಸ ನೇಮಕಾತಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಸಕ್ತಿ ವಹಿಸದಿರುವ ಕುರಿತು ಜನರಿಗೆ ತಿಳಿಸಿ ಸರ್ಕಾರದ ಬಂಡವಾಳ ಬಯಲು ಮಾಡಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಭ್ರಷ್ಟಾಚಾರದಲ್ಲಿ ಮುಳುಗಿದೆ
ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲೇ ಮುಳುಗಿದ್ದು, ಇವರ ಬಣ್ಣ ಬಯಲು ಮಾಡುವುದು ಪಾದಯಾತ್ರೆ ಉದ್ದೇಶ.
ಸತ್ಯ ಎದುರಿಸಲಾಗದೆ ಕಾಂಗ್ರೆಸ್ ಸರ್ಕಾರ ಅನಿರ್ದಿಷ್ಟಾವಧಿಗೆ ವಿಧಾನಮಂಡಲ ಅಧಿವೇಶನ ಮುಂದೂಡಿ ಪಲಾಯನ ಮಾಡುವ ಮೂಲಕ ಜನರ ಜ್ವಲಂತ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡದೆ ಅನ್ಯಾಯ ಮಾಡಿದೆ.
ಅಧಿವೇಶನ ಆರಂಭಕ್ಕೂ ಮುನ್ನವೇ ವಾಲ್ಮೀಕಿ ನಿಗಮ ಹಗರಣದ ಆರೋಪಿ, ಕಳಂಕಿತ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಲು, ಅಧಿವೇಶನದಲ್ಲಿ ಜನರ ಸಮಸ್ಯೆ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದೆವು.

ಸರ್ಕಾರ ಪಲಾಯನ
ಸರ್ಕಾರ ಅಧಿವೇಶನ ಮೊಟಕು ಮಾಡಿ ಓಡಿ ಹೋಗಿದೆ, ರಾಜ್ಯದಲ್ಲಿ ಭೀಕರ ಬರ ಇದೆ, ಕೆಪಿಎಸ್ಸಿ ಹಗರಣ, ಸರ್ಕಾರಿ ನೇಮಕಾತಿ, ಉತ್ತರ ಕರ್ನಾಟಕ ಸಮಸ್ಯೆ, ಬಿಡದಿ ಟೌನ್ಶಿಪ್, ನೈಸ್ ಮುಂತಾದ ಸಮಸ್ಯೆ ಕುರಿತು ಸದನದಲ್ಲಿ ಚರ್ಚೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದೆವು.
ಚರ್ಚೆಗೆ ಅವಕಾಶ ನೀಡಿದರೆ ಕಾಂಗ್ರೆಸ್ ಸರ್ಕಾರದ ಮುಖವಾಡ ಬಯಲಾಗುತ್ತದೆ ಎಂದು ಹೆದರಿ ಮುಖ್ಯಮಂತ್ರಿ ಓಡಿ ಹೋಗಿದ್ದಾರೆ.
ವಾಲ್ಮೀಕಿ ನಿಗಮ ಹಗರಣದಿಂದಾಗಿ ಬೋವಿ ಸಮಾಜದ ಚಂದ್ರಶೇಖರ್ ಎಂಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು, ಅವರು ಬರೆದ ಡೆತ್ನೋಟ್ ಎಲ್ಲ ಸತ್ಯವನ್ನೂ ಹೇಳುತ್ತಿದೆ, ಸಚಿವರ ಮೌಖಿಕ ಆದೇಶದ ಮೇರೆಗೆ ನಿಗಮದ ಹಣ ವರ್ಗಾವಣೆ ಮಾಡಿದ್ದಾಗಿ ನಮೂದಿಸಿದ್ದಾರೆ.
ಸಚಿವ ನಾಗೇಂದ್ರ ಆರೋಪಿ
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲದೆ, ಈಗಿನ ಮುಖ್ಯಮಂತ್ರಿ ಶಿವಕುಮಾರ್ ಸಂಪುಟದ ಶಿವಲಿಂಗೇಗೌಡ ಸಹಾ ನಾಗೇಂದ್ರ ಆರೋಪಿ ಎಂಬುದಾಗಿ ಒಪ್ಪಿಕೊಂಡಿದ್ದು, ಇಷ್ಟಾದರೂ ಸರ್ಕಾರ ಭಂಡತನ ತೋರುತ್ತಿದೆ.
ರಾಜ್ಯದ ಸಮಸ್ಯೆಗಳ ಚರ್ಚೆಗೆ ಅಧಿವೇಶನದಲ್ಲಿ ಅವಕಾಶ ನೀಡದೆ ಸರ್ಕಾರ ಸಮಯ ವ್ಯರ್ಥ ಮಾಡಿತು.
ಸರ್ಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದ್ದು, ಇತ್ತೀಚಿನ ದಿನಗಳಲ್ಲಿ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದೆ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ ಸಹಾ ನೀಡುತ್ತಿಲ್ಲ, ಕಲ್ಯಾಣ ಯೋಜನೆ ಸೇರಿದಂತೆ ಹಲವು ವಿಷಯ ಕುರಿತು ಚರ್ಚೆಗೆ ಅವಕಾಶ ನೀಡಲಿಲ್ಲ.
ರಿಯಲ್ ಎಸ್ಟೇಟ್ ಆಸಕ್ತಿ
ಬಿಡದಿ ಟೌನ್ಶಿಪ್, ಕನಕಪುರ ವಿಮಾನ ನಿಲ್ದಾಣ, ನೈಸ್ ಯೋಜನೆ ಮೂಲಕ ರಿಯಲ್ ಎಸ್ಟೇಟ್ ಕಡೆಗೇ ಶಿವಕುಮಾರ್ ಆಸಕ್ತಿ ಇದ್ದು, ಜೊತೆಗೆ ಈಗ ಉದ್ಯಾನಗಳ ಜಾಗ ಕಬಳಿಸಲು ಮುಂದಾಗಿದ್ದಾರೆ, ಒಂದು ಕಡೆ ಕೋಟಿ ಸಸಿ ನೆಡುವ ದಾಖಲೆ, ಮತ್ತೊಂದು ಕಡೆ ರಿಯಲ್ ಎಸ್ಟೇಟ್ಗೆ ಉತ್ತೇಜನ, ಇದು ಮುಖ್ಯಮಂತ್ರಿಯ ದ್ವಂದ್ವ ನೀತಿಯಾಗಿದೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಶಿವಕುಮಾರ್ ಬಹಳ ಉತ್ಸಾಹ ತೋರಿದರು, ಎರಡೂವರೆ ತಿಂಗಳ ನಂತರ ಕಳೆಗುಂದಿದ್ದಾರೆ, ಸಚಿವ ಸಂಪುಟ ವಿಸ್ತರಣೆ, ಖಾತೆ ಪಟ್ಟಿ ಬಿಡುಗಡೆ, ಖಾತೆ ಹಂಚಿಕೆಗೆ ಅಸಮಾಧಾನ, ಇದರ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುನಿಸು ಶಮನಕ್ಕೆ ಪರದಾಡುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಪಾದಯಾತ್ರೆ ಸಾಗುವ ಮಾರ್ಗದ ಪೋಸ್ಟರ್ ಬಿಡುಗಡೆ ಮಾಡಲಾಯಿತು.


