ರಾಜ್ಯ ಸರ್ಕಾರ ಜನಪರ ಯೋಜನೆ ಅನುಷ್ಠಾನ ಮಾಡುತ್ತಿದೆ
ಮಂಡ್ಯ:ರಾಜ್ಯದಲ್ಲಿ 223 ತಾಲ್ಲೂಕಿನಲ್ಲಿ ಬರ ಇದೆ, 17,000 ಕೋಟಿ ರೂ. ಪರಿಹಾರ ಕೋರಿದ್ದೇವೆ, ಕೇಂದ್ರದಿಂದ ಈವರೆಗೂ ಯಾವುದೇ ನೆರವು, ಪೂರಕ ಸ್ಪಂದನೆ ದೊರೆತಿಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ರೈತರ ಪರ 1,500 ಕೋಟಿ ರೂ. ವಿಮೆ ಹಣ ಪಾವತಿ ಮಾಡಿದೆ, 230 ಕೋಟಿ ರೂ. ವಿಮೆ ರೈತರಿಗೆ ಈಗಾಗಲೇ ಪಾವತಿಯಾಗಿದೆ ಎಂದರು.
ರಾಜ್ಯ ಸರ್ಕಾರ ಜನಪರ ಯೋಜನೆ ಅನುಷ್ಠಾನ ಮಾಡುತ್ತಿದೆ, ಅಧಿಕಾರಕ್ಕೆ ಬಂದ ಕೂಡಲೆ ನಾಲ್ಕು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ, ನುಡಿದಂತೆ ನಡೆದಿದ್ದೇವೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೆ ಪ್ರಭುಗಳು, ಚುನಾವಣೆಗಳಲ್ಲಿ ಯೋಗ್ಯರನ್ನು ಆಯ್ಕೆ ಮಾಡಬೇಕು, ಆ ಅಧಿಕಾರ ಜನರ ಕೈಯಲ್ಲಿ ಇದೆ, ಅದನ್ನು ಸರಿಯಾಗಿ ಬಳಸಿ.
ಅವಕಾಶ ಸಿಕ್ಕಾಗ ಜನರಿಗೆ ಸಹಾಯ ಮಾಡಬೇಕು, ನೀವು ನೀಡಿದ ಜವಾಬ್ದಾರಿ ಮುತುವರ್ಜಿಯಿಂದ ನಿರ್ವಹಣೆ ಮಾಡುತ್ತಿರುವೆ ಎಂದರು.
ರಾಜ್ಯಾದ್ಯಂತ ಸಂಪೂರ್ಣ ಮಳೆಯಾಶ್ರಿತ ಪ್ರದೇಶದಲ್ಲಿ ಜಲಾನಯನ ಇಲಾಖೆ ಮೂಲಕ ರೈತರ ಆರ್ಥಿಕ ಅಭಿವೃದ್ಧಿಗೆ ಹಲವು ನೆರವು ನೀಡಲಾಗುತ್ತಿದೆ, ಸೌಲಭ್ಯ ವಿತರಿಸಲಾಗುತ್ತಿದೆ ಎಂದರು.
ದೇವಲಾಪುರ ಹಾಗೂ ದಣೆವರ ಮಲ್ಲನಾಯಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ 17 ಗ್ರಾಮಗಳ 1689 ರೈತರಿಗೆ ಶೇ. 80 ಸಬ್ಸಿಡಿಯೊಂದಿಗೆ 2 ಕೋಟಿ ರೂ.ಗೂ ಅಧಿಕ ಸಹಾಯಧನದಲ್ಲಿ ಜೀವನೋಪಾಯ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ಯೋಜನೆಗಳು ಜಾರಿಯಾಗಲಿವೆ ಎಂದು ಕೃಷಿ ಸಚಿವರು ತಿಳಿಸಿದರು.
ಹೇಮಾವತಿ ಜಲಾಶಯದಿಂದ ಮಂಡ್ಯ ಜಿಲ್ಲೆಗೆ ನೀರು ಹರಿಸುವ ನಾಲೆಗಳ ದುರಸ್ತಿಗೆ ಕ್ರಮ ವಹಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ರಾಜ್ಯದಲ್ಲಿ 13,000 ಶಿಕ್ಷಕರ ನೇಮಕಾತಿ ಮಾಡಲಾಗುವುದು, ವಿವಿಧ ಇಲಾಖೆಗಳ ಖಾಲಿ ಹುದ್ದೆ ಭರ್ತಿಗೂ ಕ್ರಮ ವಹಿಸಲಾಗುವುದು ಎಂದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಮಾತನಾಡಿ, ರೈತರಿಗೆ ವಿವಿಧ ಮೇಳ ಆಯೋಜಿಸಿ ಸರ್ಕಾರದ ವಿವಿಧ ಸವಲತ್ತುಗಳನ್ನು ಯಾವುದೇ ಮಧ್ಯವರ್ತಿಗಳಿಲ್ಲದೇ ಒದಗಿಸುತ್ತಿರುವುದು ಸ್ವಾಗತಾರ್ಹ, ಇಂತಹ ಮೇಳಗಳು ರಾಜ್ಯಾದ್ಯಂತ ಹೆಚ್ಚಾಗಿ ನಡೆಯಬೇಕು ಎಂದರು.
ರೈತರು ಸದಾ ದೇಶದ ಶಕ್ತಿ, ಹಳ್ಳಿಗಳು ಹಾಗೂ ಕೃಷಿಕರು ಉಳಿದರೆ ಮಾತ್ರ ದೇಶ ಉಳಿದು, ಆರ್ಥಿಕತೆ ಹೆಚ್ಚುತ್ತದೆ ಎಂದರು.


