ಬೆಂಗಳೂರು:ಬರ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ 3,705 ಕೋಟಿ ರೂ. ನೆರವು ನೀಡುವಂತೆ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ.
ಮೊದಲ ಹಂತದಲ್ಲಿ ರಾಜ್ಯದ 121 ತಾಲ್ಲೂಕುಗಳನ್ನು ಬರಪೀಡಿತ ಘೋಷಣೆ ಮಾಡಿದ್ದು, ಈ ಭಾಗದಲ್ಲೇ 18,748 ಕೋಟಿ ರೂ. ಮೌಲ್ಯದ ಬೆಳೆ ಹಾನಿಯಾಗಿದೆ ಎಂದು ತಿಳಿಸಿದೆ.
ಭೀಕರ ಬರ ಪರಿಸ್ಥಿತಿ
ಎಲ್-ನಿನೋ ಪರಿಣಾಮ ಕರ್ನಾಟಕದಲ್ಲಿ ಈ ಬಾರಿ ಮಳೆಯ ತೀವ್ರ ಅಭಾವ ಎದುರಾಗಿದೆ, ಉತ್ತರ ಮತ್ತು ದಕ್ಷಿಣ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಬರದ ಪರಿಸ್ಥಿತಿ ಭೀಕರವಾಗಿದೆ.
ಈಗಾಗಲೇ ಕೇಂದ್ರದ ಬರ ಮಾನದಂಡ ಪ್ರಕಾರ 121 ತಾಲ್ಲೂಕುಗಳನ್ನು ಬರಪೀಡಿತ ಘೋಷಣೆ ಮಾಡಲಾಗಿದೆ.
ಸೆಪ್ಟೆಂಬರ್ ಅಂತ್ಯಕ್ಕೆ ಮತ್ತಷ್ಟು ತಾಲ್ಲೂಕುಗಳು ಬರಪೀಡಿತ ವ್ಯಾಪ್ತಿಗೆ ಬರಲಿವೆ, ಈಗಾಗಲೇ ಬರ ಪರಿಸ್ಥಿತಿ ಅಧ್ಯಯನ ಪ್ರಗತಿಯಲ್ಲಿದೆ, ಈ ವ್ಯಾಪ್ತಿಗೆ ಮತ್ತಷ್ಟು ತಾಲ್ಲೂಕುಗಳು ಸೇರ್ಪಡೆ ಆಗಲಿವೆ.
ಬೆಳೆ ನಷ್ಟ ಅಂದಾಜು
ಒಟ್ಟಾರೆ ಬೆಳೆ ನಷ್ಟದ ಅಂದಾಜು ಪರಿಶೀಲಿಸಿ ತಿಂಗಳಾಂತ್ಯಕ್ಕೆ ಅಂತಿಮವಾಗಿ ಮತ್ತೊಂದು ಮನವಿ ಸಲ್ಲಿಸುವುದಾಗಿ ತಿಳಿಸಿದೆ.
ಮೊದಲ ಹಂತದಲ್ಲಿ ಘೋಷಣೆಯಾದ ತಾಲ್ಲೂಕುಗಳಲ್ಲಿ 17.85 ಲಕ್ಷ ಹೆಕ್ಟೇರ್ ವ್ಯಾಪ್ತಿಯಲ್ಲಿ ಕೃಷಿ ಬೆಳೆ ನಷ್ಟವಾಗಿದೆ, 1.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ನಷ್ಟವಾಗಿದ್ದು, ಇದಕ್ಕಾಗಿ ಎನ್‌ಡಿಆರ್‌ಎಫ್ ಮಾನದಂಡದಡಿ ರಾಜ್ಯಕ್ಕೆ 2017.27 ಕೋಟಿ ರೂ. ನೆರವು ನೀಡಬೇಕು.
ಈ ಪ್ರದೇಶಗಳಲ್ಲಿ 476 ಜಾನುವಾರು ಶಿಬಿರಗಳನ್ನು ತೆರೆಯಬೇಕಿದೆ, ಇದಕ್ಕಾಗಿ209.21 ಕೋಟಿ ರೂ., ಮೇವು ಬ್ಯಾಂಕ್‌ಗಳನ್ನು ಈ ಸ್ಥಳಗಳಲ್ಲಿ ಪ್ರಾರಂಭಿಸಲು 583 ಕೋಟಿ ರೂ., ಜಾನುವಾರುಗಳ ಔಷಧ ಮತ್ತು ಲಸಿಕೆಗಾಗಿ 241.61 ಕೋಟಿ ರೂ. ನೆರವು ನೀಡುವಂತೆ ಮನವಿ ಮಾಡಿದೆ.
3,705.30 ಕೋಟಿ ರೂ. ಬೇಡಿಕೆ
ಅಲ್ಲದೆ, ಉಳಿದಂತೆ ಮೆಡಿಷನ್ಸ್ ಪೌಷ್ಠಿಕ ಆಹಾರ ಖರೀದಿಗೆ 21.27 ಕೋಟಿ ರೂ., ಮೇವು ಕಿಟ್ ಖರೀದಿಗೆ 89.55 ಕೋಟಿ ರೂ. ಸೇರಿದಂತೆ ಒಟ್ಟು 3,705.30 ಕೋಟಿ ರೂ. ಪರಿಹಾರ ನೀಡಿ ಎಂದು ಕೋರಲಾಗಿದೆ.
ಸೆಪ್ಟೆಂಬರ್ 9, 2026ರ ವೇಳೆಗೆ ಕರ್ನಾಟಕದಲ್ಲಿ ಸಾದಾರಣವಾಗಿ 733 ಮಿಲಿ ಮೀಟರ್ ಮಳೆ ಆಗಬೇಕಿತ್ತು, ಆದರೆ, 487 ಮಿಲಿ ಮೀಟರ್ ಮಾತ್ರ ಮಳೆ ಆಗಿದ್ದು, ಶೇಕಡಾ 34ರಷ್ಟು ಕೊರತೆ ಎದುರಾಗಿದೆ.
ಈ ಕೊರತೆ 4 ಹವಾಮಾನ ವಿಭಾಗಗಳಲ್ಲಿ ವ್ಯಾಪಕವಾಗಿದ್ದು, ಕರಾವಳಿ ಕರ್ನಾಟಕದಲ್ಲಿ ಶೇ.26ರಷ್ಟು, ಮಲೆನಾಡಿನಲ್ಲಿ ಶೇ.36, ಉತ್ತರ ಒಳನಾಡಿನಲ್ಲಿ ಶೇ.38 ಮತ್ತು ದಕ್ಷಿಣ ಒಳನಾಡಿನಲ್ಲಿ ಶೇ.47ರಷ್ಟು ಮಳೆ ಕೊರತೆಯಾಗಿದೆ, ದಕ್ಷಿಣ ಒಳನಾಡಿನಲ್ಲಿ ಅತ್ಯಂತ ಹೆಚ್ಚಿನ ಕೊರತೆ ದಾಖಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಪರಿಸ್ಥಿತಿ ಇನ್ನಷ್ಟು ಗಂಭೀರ
ರಾಜ್ಯದ 31 ಜಿಲ್ಲೆಗಳ ಪೈಕಿ 30 ಜಿಲ್ಲೆಗಳು ಮಳೆ ಕೊರತೆ ವರ್ಗಕ್ಕೆ ಸೇರಿವೆ, ತಾಲೂಕು ಹಂತದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದ್ದು, 240 ತಾಲೂಕುಗಳ ಪೈಕಿ 182 ತಾಲೂಕುಗಳು ಕೊರತೆ ವರ್ಗದಲ್ಲಿ ಹಾಗೂ 21 ತಾಲೂಕುಗಳು ತೀವ್ರ ಕೊರತೆ ವರ್ಗದಲ್ಲಿವೆ.
ಅಂದರೆ, ರಾಜ್ಯದ ಶೇಕಡಾ 85ರಷ್ಟು ತಾಲೂಕುಗಳು ಮಳೆ ಕೊರತೆಯಿಂದ ತೀವ್ರ ಕೊರತೆಯವರೆಗಿನ ಪರಿಸ್ಥಿತಿ ಎದುರಿಸುತ್ತಿವೆ ಎಂದು ವಿವರಿಸಲಾಗಿದೆ.
ಬಿತ್ತನೆ ಪ್ರದೇಶ ಕಡಿಮೆ
ಸೆಪ್ಟಂಬರ್ 4, 2026ರ ವೇಳೆಗೆ, 84.10 ಲಕ್ಷ ಹೆಕ್ಟೇರ್ ಗುರಿಗೆ ಪ್ರತಿಯಾಗಿ 67.32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ, ನಿಗದಿತ ಗುರಿಯ ಶೇ.80ರಷ್ಟು ಹಾಗೂ ಸಾದಾರಣ ಪ್ರದೇಶದ ಶೇ.೮೮ರಷ್ಟು ಭಾಗ ತಲುಪಿದೆ.
ಮಳೆ ಅಭಾವದಿಂದ ಬಿತ್ತನೆ ಪ್ರಗತಿ ಜಿಲ್ಲೆಯಿಂದ ಜಿಲ್ಲೆಗೆ ಏರಿಳಿತಗಳಿಂದ ಕೂಡಿದೆ, ಸುದೀರ್ಘ ಒಣ ಹವೆ (ಮಳೆ ಇಲ್ಲದಿರುವುದು), ವಿಶಾಲ ಪ್ರದೇಶಗಳಲ್ಲಿ ಬೆಳೆದು ನಿಂತಿರುವ ಬೆಳೆಗಳ ಮೇಲೆ ತೀವ್ರ ದುಷ್ಪರಿಣಾಮ ಬೀರಿದೆ ಎಂದು ತಿಳಿಸಲಾಗಿದೆ.


