ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ದೆಹಲಿಯಲ್ಲಿ ಲಾಬಿ ಮಾಡಿಲ್ಲ
ಬೆಂಗಳೂರು:ಪುತ್ರ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಲು ದೆಹಲಿಯಲ್ಲಿ ಲಾಬಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಈ ಸ್ಥಾನ ಧಕ್ಕುತ್ತದೆ ಎಂಬ ನಿರೀಕ್ಷೆಯೂ ಇರಲಿಲ್ಲ ಎಂದಿದ್ದಾರೆ.
ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸಕಾಲದಲ್ಲಿ ಒಳ್ಳೆಯ ನಿರ್ಧಾರ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ವಿಜಯೇಂದ್ರ ನೇಮಕಾತಿ ರಾಜ್ಯ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ. ಮೋದಿ ಅವರಂಥ ನಾಯಕ ಕಿರಿಯನಿಗೆ ಇಂತಹ ಸ್ಥಾನ ನೀಡುವ ಮೂಲಕ ಅಗ್ನಿ ಪರೀಕ್ಷೆ ನೀಡಿದ್ದಾರೆ.
ರಾಜ್ಯಾದ್ಯಂತ ಪ್ರವಾಸ ; ಲೋಕಸಭಾ ಚುನಾವಣೆ ಗೆಲುವೆ ಮುಂದಿನ ಗುರಿ
ಇಂತಹ ಪರೀಕ್ಷೆಯಲ್ಲಿಯೇ ಭರ್ಜರಿ ಜಯಗಳಿಸುವುದೇ ಮುಂದಿರುವ ಸವಾಲು. ಈ ಸವಾಲನ್ನು ಸ್ವೀಕರಿಸಿ ಆಗಿದೆ. ನಾನು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ 25 ಸ್ಥಾನಗಳನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತೇನೆ.
ಪುತ್ರನಿಗಾಗಿ ನಾನೇನು ದಂಡಯಾತ್ರೆ ಮಾಡಿರಲಿಲ್ಲ. ಬೇಕಾದರೆ, ನೀವೇ ದೆಹಲಿಯವರನ್ನು ಕೇಳಿ ಎಂದು ಸುದ್ದಿಗಾರರಿಗೆ ಮರು ಪ್ರಶ್ನೆ ಮಾಡಿದ ಅವರು, ಕರ್ನಾಟಕದ ಜನತೆಯ ನಾಡಿ ಮಿಡಿತ ಅರಿತು ಈ ನೇಮಕ ಮಾಡಿದ್ದಾರೆ.
ಮುಂದೆ ಕಠಿಣ ಹೆಜ್ಜೆ ಇದೆ. ಇದನ್ನು ಸುಲಭಗೊಳಿಸಲು ಎಲ್ಲರ ವಿಶ್ವಾಸ ಪಡೆಯಬೇಕು. ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸಿ ಚುನಾವಣೆಗೆ ಸಜ್ಜುಗೊಳಿಸುವ ಅಗತ್ಯ ಇದೆ ಎಂದರು.
ಪುತ್ರನಿಗೆ ಕಿರಿಯ ವಯಸ್ಸಿನಲ್ಲೇ ದೊಡ್ಡ ಸ್ಥಾನ ದೊರೆತಿದೆ. ಇದು ಆತನಿಗೆ ದೊಡ್ಡ ಸವಾಲು. ಈಗಿನ ಪರಿಸ್ಥಿತಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ 25 ಸ್ಥಾನ ಗೆಲ್ಲುವುದು ಕಠಿಣ ಹಾದಿಯಾಗಿದೆ.


