ಬೆಂಗಳೂರು:ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಅಪಹರಣ ಆರೋಪ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಅವರ ಹೆಚ್ಚಿನ ವಿಚಾರಣೆಗೆ ಜೂನ್ 10ರವರೆಗೆ ಮತ್ತೆ ಎಸ್‌ಐಟಿ ಕಸ್ಟಡಿ ಅವಧಿ ವಿಸ್ತರಿಸಿ ನ್ಯಾಯಾಲಯ ಆದೇಶಿಸಿದೆ.
ಪ್ರಜ್ವಲ್ ಅವರ ಎಸ್‌ಐಟಿ ಕಸ್ಟಡಿ ಅವಧಿ ಇಂದು ಮುಕ್ತಾಯವಾಗಲಿದ್ದರಿಂದ, ಅಧಿಕಾರಿಗಳು ಮತ್ತೆ ನಗರದ 42ನೇ ಎಸಿಎಂಎಂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ವಾದ-ಪ್ರತಿವಾದ ಆಲಿಸಿದ ನಂತರ ನ್ಯಾಯಾಧೀಶ ಕೆ.ಎನ್.ಶಿವಕುಮಾರ್, ಕಸ್ಟಡಿ ಅವಧಿಯನ್ನು ಇನ್ನೂ ನಾಲ್ಕು ದಿನಗಳಿಗೆ ವಿಸ್ತರಿಸಿದರು.
ತನಿಖೆ ಇನ್ನೂ ಮುಗಿದಿಲ್ಲ
ಸರ್ಕಾರಿ ವಕೀಲ ಅಶೋಕ್ ನಾಯಕ್ ವಾದ ಮಂಡನೆ ಮಾಡಿ, ಪ್ರಕರಣದ ತನಿಖೆ ಇನ್ನೂ ಮುಗಿದಿಲ್ಲವಾದ್ದರಿಂದ ಆರೋಪಿ ಕಸ್ಟಡಿ ವಿಸ್ತರಿಸುವಂತೆ ಕೋರಿದರು.
ಇದಕ್ಕೆ ಪ್ರಜ್ವಲ್ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿ, ಕಸ್ಟಡಿ ಅವಧಿ ವಿಸ್ತರಣೆ ಅಗತ್ಯವಿಲ್ಲ, ಪ್ರಜ್ವಲ್ ವಿದೇಶಕ್ಕೆ ತೆರಳುವುದು, ಹಣ ಹೇಗೆ ಸಂದಾಯವಾಯಿತು ಎಂಬುದು ತನಿಖೆ ವ್ಯಾಪ್ತಿಯಲ್ಲಿಲ್ಲ, ಇದಕ್ಕಾಗಿ ಕಸ್ಟಡಿಗೆ ಪಡೆದು ತನಿಖೆ ನಡೆಸುವ ಅಗತ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ನ್ಯಾಯಾಧೀಶರು, ಕಸ್ಟಡಿಗೆ ಏಕೆ ನೀಡಬೇಕು ಎಂದು ಕೇಳಿ, ಜೊತೆಗೆ ತನಿಖಾಧಿಕಾರಿಗಳಿಗೆ ಕೇಸ್ ಡೈರಿ ನೀಡಲು ಆದೇಶಿಸಿದರು.
ಕಸ್ಟಡಿಯಲ್ಲಿ ಸಮಸ್ಯೆ ಆಗಿಲ್ಲ
ಅಲ್ಲದೆ, ಪ್ರಜ್ವಲ್ ಅವರನ್ನು ಕಸ್ಟಡಿ ಅವಧಿಯಲ್ಲಿ ಏನಾದರೂ ಸಮಸ್ಯೆ ಉಂಟಾಯಿತೆ ಎಂದು ಕೇಳಿದಾಗ, ಪ್ರಜ್ವಲ್, ಇಲ್ಲ ಎಂದು ಉತ್ತರಿಸಿದರು.
ಮುಂದುವರಿದು ವಾದ ಮಂಡಿಸಿದ ಸರ್ಕಾರಿ ವಕೀಲರು, ತನಿಖೆಗೆ ಸಿಕ್ಕ ಸಮಯ ಸಾಕಾಗಿಲ್ಲ, ಬಂಧನದ ನಂತರ ಅವರು ವಿಶ್ರಾಂತಿಗೆ ಒಳಗಾದರು.
ವಿದೇಶದಲ್ಲಿ ಇದ್ದ ವೇಳೆ ಹಣ ಹೇಗೆ ಸಂದಾಯವಾಯಿತು ಎಂದು ತಿಳಿದಿಲ್ಲ, ಈ ಬಗ್ಗೆ ಇನ್ನೂ ತನಿಖೆ ಆಗಬೇಕಿದೆ.
ಮುಖಾಮುಖಿ ವಿಚಾರಣೆ ಬಾಕಿ
ಕೆಲವು ಸಂತ್ರಸ್ತೆ ಸಾಕ್ಷಿಗಳೊಂದಿಗೆ ಮುಖಾಮುಖಿ ವಿಚಾರಣೆ ನಡೆಯಬೇಕಿದೆ, ನಾನು ಏನೂ ಮಾಡಿಲ್ಲ ಎಂದು ಪ್ರಜ್ವಲ್ ಹೇಳುತ್ತಿದ್ದಾರೆ, ಅಲ್ಲದೆ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋಗಿದ್ದರು, ಹೀಗಾಗಿ ಪೂರ್ಣ ತನಿಖೆ ನಡೆದಿಲ್ಲ.
ಆರೋಪಿಯ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣಗಳ ಬಗ್ಗೆ ತನಿಖೆ ಮಾಡಬೇಕಿದೆ, ಇವರು ಮೊಬೈಲ್ ನಾಶ ಪಡಿಸಿರುವ ಬಗ್ಗೆ ಮಾಹಿತಿ ಇದೆ.
ನನ್ನ ಮೊಬೈಲ್ ಇಲ್ಲ, ನಾನು ಪಿಎ ಮೊಬೈಲ್ ಉಪಯೋಗಿಸುತ್ತಿದ್ದೆ ಎಂದಿದ್ದಾರೆ, ಈ ಎಲ್ಲ ವಿಷಯಗಳ ಬಗ್ಗೆ ಹೆಚ್ಚಿನ ತನಿಖೆ ಅವಶ್ಯ ಇರುವುದರಿಂದ ಕಸ್ಟಡಿ ಅವಧಿ ವಿಸ್ತರಿಸುವಂತೆ ಮನವಿ ಮಾಡಿದರು.


