ಬೆಂಗಳೂರು:ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಮಂತ್ರಿಮಂಡಲ ವಿಸ್ತರಿಸಿ ಹೊಸದಾಗಿ 19 ಮಂದಿಯನ್ನು ಸಂಪುಟಕ್ಕೆ ಇಂದಿಲ್ಲಿ ಸೇರ್ಪಡೆ ಮಾಡಿಕೊಂಡಿದ್ದಾರೆ.
ಲೋಕಭವನದ ಗಾಜಿನಮನೆಯಲ್ಲಿ ಸಂಜೆ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು, ಇದರೊಂದಿಗೆ ಶಿವಕುಮಾರ್ ಸಂಪುಟದ ಒಂದು ಸ್ಥಾನ ಉಳಿಸಿಕೊಂಡು ಉಳಿದ ಎಲ್ಲಾ ಸ್ಥಾನಗಳು ಭರ್ತಿಯಾಗಿವೆ.
ಲಕ್ಷ್ಮಣ ಸವದಿ, ಬಸವರಾಜ ರಾಯರೆಡ್ಡಿ
ಲಕ್ಷ್ಮಣ ಸವದಿ (ಬೆಳಗಾವಿ), ಬಸವರಾಜ ರಾಯರೆಡ್ಡಿ (ಕೊಪ್ಪಳ), ವಿಜಯಾನಂದ ಕಾಶಪ್ಪನವರ್ (ಬಾಗಲಕೋಟೆ), ಪಿ.ಎಂ.ನರೇಂದ್ರ ಸ್ವಾಮಿ ಹಾಗೂ ಎನ್.ಚಲುವರಾಯ ಸ್ವಾಮಿ (ಮಂಡ್ಯ).
ಕೆ.ಎಂ.ಶಿವಲಿಂಗೇಗೌಡ (ಹಾಸನ), ಎಚ್.ಸಿ.ಬಾಲಕೃಷ್ಣ (ಬೆಂಗಳೂರು ದಕ್ಷಿಣ), ಶಿವರಾಜ್ ತಂಗಡಗಿ (ರಾಯಚೂರು), ರುದ್ರಪ್ಪ ಲಮಾಣಿ (ಹಾವೇರಿ), ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಕೆ.ಎಸ್.ಬಸವಂತಪ್ಪ (ದಾವಣಗೆರೆ).
ಬಿ.ನಾಗೇಂದ್ರ (ಬಳ್ಳಾರಿ), ಟಿ.ರಘುಮೂರ್ತಿ (ಚಿತ್ರದುರ್ಗ), ಬಿ.ಜೆಡ್.ಜಮೀರ್ ಅಹಮದ್ ಖಾನ್, ರಿಜ್ವಾನ್ ಅರ್ಷದ್ (ಬೆಂಗಳೂರು ನಗರ), ಸಂತೋಷ್ ಲಾಡ್ (ಧಾರವಾಡ).
ಪುಟ್ಟರಂಗಶೆಟ್ಟಿ, ಡಾ.ಅಜಯ್ ಸಿಂಗ್
ಎಸ್.ಮಧುಬಂಗಾರಪ್ಪ (ಶಿವಮೊಗ್ಗ), ಪುಟ್ಟರಂಗಶೆಟ್ಟಿ (ಚಾಮರಾಜನಗರ), ಡಾ.ಅಜಯ್ ಸಿಂಗ್ (ಯಾದಗಿರಿ) ಇವರುಗಳು ಶಿವಕುಮಾರ್ ಸಂಪುಟಕ್ಕೆ ಸೇರ್ಪಡೆಗೊಂಡರು.
ಸಂವಿಧಾನ, ದೇವರು ಹಾಗೂ ತಮ್ಮ ಆಪ್ತ ಗುರುಪೀಠಗಳ ಹೆಸರಿನಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಕರ್ನಾಟಕದ ಎಲ್ಲ ಸಮುದಾಯಗಳಿಗೂ ಅರ್ಥಪೂರ್ಣ ಪ್ರಾತಿನಿಧ್ಯ ನೀಡುವ ಮೂಲಕ ಶಿವಕುಮಾರ್ ಸಾಮಾಜಿಕ ನ್ಯಾಯಕ್ಕೆ ತಮ್ಮ ಬದ್ಧತೆಯನ್ನು ತೋರಿದ್ದಾರೆ.
7 ಲಿಂಗಾಯತರಿಗೆ ಸ್ಥಾನ
ಹಿಂದಿನ ಸಚಿವ ಸಂಪುಟದಲ್ಲಿದ್ದ ವರ್ಗ ಮತ್ತು ಸಮುದಾಯಗಳ ಪ್ರಾತಿನಿಧ್ಯ ಮುಂದುವರಿಸಿದ್ದು, 7 ಲಿಂಗಾಯತರಿಗೆ ಸ್ಥಾನ ನೀಡಲಾಗಿದೆ.
ಹಿಂದಿನ ಸಚಿವ ಸಂಪುಟದಂತೆಯೇ ಒಕ್ಕಲಿಗರಿಗೆ 5 ಸಚಿವ ಸ್ಥಾನ ನೀಡಿದ್ದು, ಇದರ ಜೊತೆಗೆ ಮುಖ್ಯಮಂತ್ರಿ ಸಹಾ ಒಕ್ಕಲಿಗ ಸಮುದಾಯ ಪ್ರತಿನಿಧಿಸುತ್ತಾರೆ.
ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ 7 ಪರಿಶಿಷ್ಟ ಜಾತಿ ಸಚಿವರಿಗೆ ಅವಕಾಶ ನೀಡಲಾಗಿದೆ, ಇದರಲ್ಲಿ 3 ಬಲಗೈ, 2 ಎಡಗೈ, 1 ಲಂಬಾಣಿ ಹಾಗೂ 1 ಭೋವಿ ಸಮುದಾಯದ ಪ್ರತಿನಿಧಿಗಳಿದ್ದು, ಪರಿಶಿಷ್ಟ ಜಾತಿಯ ವಿವಿಧ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸಲಾಗಿದೆ, ಪರಿಶಿಷ್ಟ ಪಂಗಡದ ೩ ಸಚಿವರಿಗೆ ಸ್ಥಾನ ನೀಡಲಾಗಿದೆ.
ಹಿಂದುಳಿದ ವರ್ಗಗಳಿಗೆ 6
ಮುಸ್ಲಿಂ ಸಮುದಾಯಕ್ಕೆ 3, ಹಿಂದುಳಿದ ವರ್ಗಗಳಿಗೆ 6 ಸಚಿವ ಸ್ಥಾನಗಳನ್ನು ನೀಡಲಾಗಿದೆ.
ಒಟ್ಟಾರೆ 33 ಸಚಿವ ಸ್ಥಾನಗಳಲ್ಲಿ 22 ಸ್ಥಾನಗಳು, ಅಂದರೆ ಶೇ.60ಕ್ಕೂ ಹೆಚ್ಚು ಎಸ್ಸಿ, ಎಸ್ಟಿ, ಒಬಿಸಿ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಪ್ರತಿನಿಧಿಗಳಿಗೆ ದೊರೆತಿವೆ.
ಕೆ.ಎಸ್.ಬಸವಂತಪ್ಪ, ಟಿ.ರಘುಮೂರ್ತಿ, ರಿಜ್ವಾನ್ ಅರ್ಷದ್, ಡಾ.ಅಜಯ್ ಸಿಂಗ್, ಕೆ.ಎಂ.ಶಿವಲಿಂಗೇಗೌಡ, ಎಚ್.ಸಿ.ಬಾಲಕೃಷ್ಣ, ವಿಜಯಾನಂದ ಕಾಶಪ್ಪನವರ್ ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ.
ಸಚಿವರಾಗಿ ಅನುಭವ
ಉಳಿದವರಿಗೆ ಬಿ.ಎಸ್.ಯಡಿಯೂರಪ್ಪ. ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸಂಟುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ.
ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ಸಂಪುಟ ಸಚಿವರು, ಶಾಸಕರು, ಕಾಂಗ್ರೆಸ್ ಸಂಸದರು ಹಾಗೂ ಪಕ್ಷದ ಹಿರಿಯ ನಾಯಕರು ಪಾಲ್ಗೊಂಡಿದ್ದರು.


