ತಮಿಳುನಾಡಿಗೆ 4.65 ಟಿಎಂಸಿ ನೀರು ಹರಿಸಲೇಬೇಕು: ಸಿಡಬ್ಲ್ಯೂಎಂಎ
ಬೆಂಗಳೂರು:ಕಾವೇರಿ ನೀರು ನಿಯಂತ್ರಣಾ ಸಮಿತಿ (ಸಿಡಬ್ಲ್ಯೂಆರ್‌ಸಿ) ಆದೇಶದಂತೆ ತಮಿಳುನಾಡಿಗೆ 4.65 ಟಿಎಂಸಿ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಸೂಚಿಸಿದೆ.
ಮುಂದಿನ 15 ದಿನ ಪ್ರತಿನಿತ್ಯ 3,500 ಕ್ಯೂಸೆಕ್ ನೀರನ್ನು ಕರ್ನಾಟಕದಿಂದ ತಮಿಳುನಾಡಿಗೆ ಹರಿಸಬೇಕು ಎಂದಿದೆ.
ಶಿಫಾರಸು ಪ್ರಶ್ನಿಸಿ ವಾದ
ಸಿಡಬ್ಲ್ಯೂಆರ್‌ಸಿ ಮಾಡಿದ್ದ ಶಿಫಾರಸು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಿಡಬ್ಲ್ಯೂಎಂಎ ಮುಂದೆ ಮೇಲ್ಮನವಿ ಸಲ್ಲಿಸಿ, ಸದ್ಯದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸಲಾಗದೆಂದು ವಾದ ಮಂಡಿಸಿತು.
ಕರ್ನಾಟಕ ಕಾವೇರಿ ಜಲಾನಯನ ಪ್ರದೇಶದಲ್ಲಿನ ಜಲಾಶಯಗಳಲ್ಲಿ ಕೇವಲ 44 ಟಿಎಂಸಿ ಮಾತ್ರ ನೀರು ಸಂಗ್ರಹವಿದೆ.
ತಮಿಳುನಾಡಿನ ಮೆಟ್ಟೂರು, ಭವಾನಿ ಸಾಗರ ಅಣೆಕಟ್ಟೆಗಳಲ್ಲಿ 41 ಟಿಎಂಸಿ ನೀರು ಸಂಗ್ರಹವಿದೆ.
ಕುಡಿಯಲೂ ಸಾಕಾಗುವುದಿಲ್ಲ
ನಮ್ಮಲ್ಲಿ ಲಭ್ಯವಿರುವ ನೀರು ಕುಡಿಯಲು ಪೂರೈಕೆಗೇ ಸಾಕಾಗುವುದಿಲ್ಲ, ನಮಗೆ ಕುಡಿಯಲು ಮಾಸಿಕ 3.25 ಟಿಎಂಸಿ ನೀರಿನ ಅಗತ್ಯ ಇದೆ.
ಸಂಗ್ರಹಿತ ನೀರನ್ನು ನಾವು ಕುಡಿಯಲು ಮಾತ್ರ ಬಳಸುತ್ತಿದ್ದು, ಕೃಷಿ ಚಟಿವಟಿಕೆಗಳಿಗೆ ನೀಡುತ್ತಿಲ್ಲ ಎನ್ನುವ ಮೂಲಕ, ಕಳೆದ 10 ವರ್ಷಗಳಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಎಷ್ಟಾಗಿದೆ, ತಮಿಳುನಾಡಿಗೆ ಎಷ್ಟು ಹರಿಸಲಾಗಿದೆ ಎಂಬ ಅಂಕಿ-ಅಂಶಗಳೊಂದಿಗೆ ವಾದ ಮಂಡಿಸಿತು.
ಕಳೆದ ಮುಂಗಾರಿನಲ್ಲಿ ಉತ್ತಮ ಮಳೆಯಿಂದಾಗಿ 336ಕ್ಕೂ ಹೆಚ್ಚು ಟಿಎಂಸಿ ನೀರು ತಮಿಳುನಾಡಿಗೆ ಹರಿದಿದೆ.
ಇತಿಹಾಸದಲ್ಲೇ ಕಡಿಮೆ ಮಳೆ
ಕಳೆದ 150 ವರ್ಷಗಳ ಇತಿಹಾಸದಲ್ಲೇ ಮಳೆ ಪ್ರಮಾಣ ಈ ಬಾರಿ ಬಹಳಷ್ಟು ಕಡಿಮೆಯಾಗಿದೆ, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ತಮಿಳುನಾಡಿಗೆ ನೀರು ಹರಿಸಲು ಅಭ್ಯಂತರ ಇಲ್ಲ ಎಂದಿತು.
ವಾದ-ಪ್ರತಿವಾದ ಆಲಿಸಿದ ಪ್ರಾಧಿಕಾರ, ಸಿಡಬ್ಲ್ಯೂಆರ್‌ಸಿ ಶಿಫಾರಸ್ಸನ್ನು ಎತ್ತಿಹಿಡಿಯಿತು.


